ಮಹಾವೀರ ಜಯಂತಿ ರಜೆ ಮಾ.30ಕ್ಕೆ ವರ್ಗಾವಣೆ – ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ
ಪುತ್ತೂರು, ಮಾ.26: ರಾಜ್ಯ ಸರ್ಕಾರವು 2026ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಮಹತ್ವದ ತಿದ್ದುಪಡಿ ಮಾಡಿದೆ. ಮಹಾವೀರ ಜಯಂತಿ ಪ್ರಯುಕ್ತ ಮಾರ್ಚ್ 31ರಂದು ಘೋಷಿಸಲಾಗಿದ್ದ ಸಾರ್ವತ್ರಿಕ ರಜೆಯನ್ನು ಇದೀಗ ಮಾರ್ಚ್ 30ಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸರ್ಕಾರದ ಅಧಿಸೂಚನೆ-1 ಮತ್ತು 2ರ ಕೋಷ್ಟಕದ ಕ್ರಮ ಸಂಖ್ಯೆ (5)ರಲ್ಲಿ ಉಲ್ಲೇಖಿಸಲಾದ ಈ ರಜಾ ದಿನವನ್ನು ಮಂಗಳವಾರ (ಮಾ.31) ಬದಲಾಗಿ ಸೋಮವಾರ (ಮಾ.30) ಎಂದು ಪರಿಷ್ಕರಿಸಲಾಗಿದೆ. ಜೊತೆಗೆ, ಈ ರಜೆಯನ್ನು ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆ, 1881ರ ಅನ್ವಯವೂ ಘೋಷಿಸಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.
ಇದರಿಂದಾಗಿ, ಮಾರ್ಚ್ 30ರಂದು ನಿಗದಿಪಡಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ತೃತೀಯ ಭಾಷೆ ವಿಷಯದ ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ. ಈಗಾಗಲೇ ಪ್ರಕಟಿಸಲಾದ ವೇಳಾಪಟ್ಟಿಯ ಪ್ರಕಾರವೇ ಮಾ.31ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳು ಹಾಗೂ ಪೋಷಕರು ಪರಿಷ್ಕೃತ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗೆ ಸಿದ್ಧರಾಗುವಂತೆ ಮಂಡಳಿ ಮನವಿ ಮಾಡಿದೆ.