ರಾಜಸ್ಥಾನದ ಪ್ರಖ್ಯಾತ ಆಧ್ಯಾತ್ಮಿಕ ಪ್ರವಚನಕಾರ್ತಿ ಸಾದ್ವಿ ಪ್ರೇಮ್ ಬೈಸಾ ಅವರ ನಿಗೂಢ ಸಾವು ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಜೋಧ್‌ಪುರದ ಬೋರಾನಾಡಾ ಆಶ್ರಮದಲ್ಲಿದ್ದ ಸಾದ್ವಿಯವರನ್ನು ಅವರ ತಂದೆ ವೀರಂ ನಾಥ್ ಮತ್ತು ಸಹಾಯಕರು ಆಸ್ಪತ್ರೆಗೆ ಕರೆದೊಯ್ದರಾದರೂ, ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಸಾದ್ವಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆರ್‌ಎಲ್‌ಪಿ ನಾಯಕ ಹನುಮಾನ್ ಬೆನಿವಾಲ್ ಅವರು ಈ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಸೃಷ್ಟಿಯಾಗಿವೆ.
ಸಾದ್ವಿ ಮೃತಪಟ್ಟ ಕೆಲವೇ ಗಂಟೆಗಳ ನಂತರ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಾಣಿಸಿಕೊಂಡ ಪೋಸ್ಟ್ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಅದನ್ನು ಆತ್ಮಹತ್ಯೆಯ ಪತ್ರವೆಂದು ಪೊಲೀಸರು ಶಂಕಿಸಿದ್ದು, ಅದರಲ್ಲಿ ಸಾದ್ವಿ ತಾವು ಅನುಭವಿಸಿದ “ಅಗ್ನಿಪರೀಕ್ಷೆ” ಬಗ್ಗೆ ಉಲ್ಲೇಖಿಸಿದ್ದಾರೆ. “ನಾನು ಸನಾತನ ಧರ್ಮದ ಪ್ರಚಾರಕ್ಕಾಗಿ ಬದುಕಿದ್ದೇನೆ, ಆದರೆ ನ್ಯಾಯಕ್ಕಾಗಿ ನಾನು ಕೋರಿದ್ದ ಅಗ್ನಿಪರೀಕ್ಷೆಗೆ ಅವಕಾಶ ಸಿಗಲಿಲ್ಲ. ನಾನು ಹೋದ ಮೇಲಾದರೂ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ” ಎಂದು ಬರೆದುಕೊಂಡಿರುವುದು ಅವರ ಮಾನಸಿಕ ಸಂಕಟವನ್ನು ಎತ್ತಿ ತೋರಿಸುತ್ತಿದೆ.
ಸಾದ್ವಿ ಸಾವಿಗೆ ಆರು ತಿಂಗಳ ಮೊದಲು ನಡೆದಿದ್ದ ಬ್ಲಾಕ್‌ಮೇಲ್ ಪ್ರಕರಣ ಈ ನಿಗೂಢತೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ತಮ್ಮ ಸಿಬ್ಬಂದಿಯೇ ಎಡಿಟ್ ಮಾಡಿದ ವಿಡಿಯೋ ಬಳಸಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಮತ್ತು 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಸಾದ್ವಿ ಈ ಹಿಂದೆ ದೂರು ನೀಡಿದ್ದರು. ಈ ಸಂಬಂಧ ಜೋಗಿಂದರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಹಿಂದೆ ವೈರಲ್ ಆಗಿದ್ದ ವಿಡಿಯೋ ಒಂದರ ಬಗ್ಗೆ ಪ್ರತಿಕ್ರಿಯಿಸಿದ್ದ ಸಾದ್ವಿ, ಅದು ತಂದೆ-ಮಗಳ ಪವಿತ್ರ ಸಂಬಂಧವನ್ನು ಹದಗೆಡಿಸುವ ಸಂಚು ಎಂದು ಕಿಡಿಕಾರಿದ್ದರು.
ಪ್ರಸ್ತುತ ಪೊಲೀಸರು ಸಾದ್ವಿಯ ಇನ್‌ಸ್ಟಾಗ್ರಾಮ್ ಪೋಸ್ಟ್ ಮತ್ತು ಹಳೆಯ ಬ್ಲಾಕ್‌ಮೇಲ್ ಪ್ರಕರಣಗಳನ್ನು ಲಿಂಕ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಇದು ಆತ್ಮಹತ್ಯೆಯೋ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಶಕ್ತಿಗಳಿವೆಯೇ ಎಂಬುದು ಸ್ಪಷ್ಟವಾಗಲಿದೆ. ಸನಾತನ ಧರ್ಮದ ಪ್ರಚಾರಕಿಯಾಗಿ ಗುರುತಿಸಿಕೊಂಡಿದ್ದ ಸಾದ್ವಿಯ ಈ ಹಠಾತ್ ಅಂತ್ಯ ಅವರ ಅನುಯಾಯಿಗಳಲ್ಲಿ ತೀವ್ರ ಶೋಕ ಮತ್ತು ಆಕ್ರೋಶವನ್ನು ಮೂಡಿಸಿದೆ.