ನಾಳೆಯಿಂದ ಅಂಗನವಾಡಿ ಕಾರ್ಯಕರ್ತೆಯರ ಮೂರು ದಿನಗಳ ದೇಶವ್ಯಾಪಿ ಪ್ರತಿಭಟನೆ
ನವದೆಹಲಿ: ಕನಿಷ್ಠ ವೇತನ, ಸೇವೆ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದೇಶದಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಾಳೆಯಿಂದ ಮೂರು ದಿನಗಳ ಪ್ರತಿಭಟನೆಗೆ ಮುಂದಾಗಿದ್ದಾರೆ.
ಏಪ್ರಿಲ್ 21ರಿಂದ 23ರವರೆಗೆ ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ಮುಂಭಾಗದಲ್ಲಿ ಈ ಪ್ರತಿಭಟನೆ ನಡೆಯಲಿದ್ದು, ವಿವಿಧ ರಾಜ್ಯಗಳಿಂದ ಸಾವಿರಾರು ಅಂಗನವಾಡಿ ನೌಕರರು ಭಾಗವಹಿಸುವ ನಿರೀಕ್ಷೆಯಿದೆ.
ಕೇಂದ್ರ ಸರ್ಕಾರ ಅಂಗನವಾಡಿ ನೌಕರರನ್ನು ಶಾಶ್ವತವಾಗಿ ನೇಮಕ ಮಾಡಬೇಕು, ಕನಿಷ್ಠ ವೇತನ ಜಾರಿಗೊಳಿಸಬೇಕು ಹಾಗೂ ಪೆನ್ಷನ್, ಗ್ರಾಚ್ಯುಟಿ ಸೇರಿದಂತೆ ಕಾನೂನುಬದ್ಧ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿವೆ ಎಂದು ರಾಜ್ಯ ಕಾರ್ಯದರ್ಶಿ ಜಯಮ್ಮ ತಿಳಿಸಿದ್ದಾರೆ.
ಮುಖ್ಯ ಬೇಡಿಕೆಗಳು:
- ಅಂಗನವಾಡಿ ನೌಕರರನ್ನು ಸಿ ಮತ್ತು ಡಿ ದರ್ಜೆಯ ಸರ್ಕಾರಿ ನೌಕರರನ್ನಾಗಿ ಖಾಯಂಗೊಳಿಸುವುದು
- ಕನಿಷ್ಠ ವೇತನ ಜಾರಿಗೆ ಕ್ರಮ
- ಸುಪ್ರೀಂ ಕೋರ್ಟ್ ಆದೇಶದಂತೆ ಗ್ರಾಚ್ಯುಟಿ ಸೌಲಭ್ಯ ಒದಗಿಸುವುದು
- ನಿವೃತ್ತಿಯ ನಂತರ ಮಾಸಿಕ ಪೆನ್ಷನ್ ವ್ಯವಸ್ಥೆ ಜಾರಿಗೊಳಿಸುವುದು
- ಆರೋಗ್ಯ ವಿಮೆ ಹಾಗೂ ಸಮಗ್ರ ಚಿಕಿತ್ಸಾ ಸೌಲಭ್ಯ
- ಯೋಜನೆಯ ಹೊರತಾಗಿ ಬೇರೆ ಕೆಲಸಗಳಿಗೆ ನಿಯೋಜನೆ ನಿಲ್ಲಿಸುವುದು
ದೀರ್ಘಕಾಲದಿಂದ ಸಾಮಾಜಿಕ ಭದ್ರತೆ ಇಲ್ಲದೆ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಸಿಬ್ಬಂದಿಗೆ ತಕ್ಷಣವೇ ನ್ಯಾಯ ಒದಗಿಸಬೇಕು ಎಂದು ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.