ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಾಂಪ್ರಬೈಲು ಎಂಬಲ್ಲಿ ಮನೆಯವರು ಜಾತ್ರೆಗೆ ತೆರಳಿದ್ದ ಸಮಯವನ್ನು ಸಂಚು ಹೂಡಿದ ಕಳ್ಳರು, ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಮನೆ ಮಾಲೀಕ ಸತೀಶ್ ಶೆಣೈ ಅವರು ಫೆಬ್ರವರಿ 4 ರಂದು ಸಂಜೆ ತಮ್ಮ ಪತ್ನಿಯೊಂದಿಗೆ ಕಶೇಕೋಡಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದ ಜಾತ್ರೋತ್ಸವಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಕಳ್ಳರು ಕೃತ್ಯ ಎಸಗಿದ್ದಾರೆ.
ರಾತ್ರಿ ಸುಮಾರು 10.30ಕ್ಕೆ ದೇವಸ್ಥಾನದಿಂದ ವಾಪಸ್ ಬಂದಾಗ ಮನೆಯ ಹಿಂಬದಿಯ ಬಾಗಿಲು ತೆರೆದಿರುವುದು ಕಂಡುಬಂದಿದೆ. ಕಳ್ಳರು ಯಾವುದೋ ಸಾಧನ ಬಳಸಿ ಬಾಗಿಲಿನ ಚಿಲಕವನ್ನು ತುಂಡರಿಸಿ ಒಳನುಗ್ಗಿದ್ದಾರೆ. ಕೋಣೆಯಲ್ಲಿದ್ದ ಕಪಾಟನ್ನು ಮೀಟಿ ತೆರೆದಿದ್ದ ಕಳ್ಳರು, ಅದರಲ್ಲಿದ್ದ ಬಟ್ಟೆಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ಲಾಕರ್‌ನಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ಕಪಾಟಿನಲ್ಲಿದ್ದ ಸ್ಟೀಲ್ ಡಬ್ಬಿಗಳು ಮಂಚದ ಮೇಲೆ ಬಿದ್ದಿರುವುದು ಮನೆಯವರ ಗಮನಕ್ಕೆ ಬಂದಿದೆ.
ಕಳ್ಳರು ಒಟ್ಟು 9 ಪವನ್ ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದು, ಇದರಲ್ಲಿ 5 ಪವನ್‌ನ ಹವಳದ ಮಾಲೆ, 2.5 ಪವನ್‌ನ ಮುತ್ತಿನ ಸರ ಹಾಗೂ 1.5 ಪವನ್ ತೂಕದ ಬೆಂಡೋಲೆ ಮತ್ತು ಜುಂಕಿ ಸೇರಿವೆ. ಇದರೊಂದಿಗೆ 5,000 ರೂಪಾಯಿ ನಗದು ಹಣವನ್ನೂ ಕಳವು ಮಾಡಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.