ಬೆಂಗಳೂರು, ಫೆ.09: ಕನ್ನಡಿಗರ ತೀವ್ರ ವಿರೋಧದ ನಡುವೆಯೂ ಮೈಸೂರು ಸ್ಯಾಂಡಲ್ ಸೋಪ್‌ನ ಪ್ರಚಾರ ರಾಯಭಾರಿಯಾಗಿ ಖ್ಯಾತ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಜ್ಯ ಸರ್ಕಾರ ನೇಮಿಸಿದ್ದು, ಒಪ್ಪಂದದಂತೆ ಅವರು ಇದೀಗ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.
ಈ ಕುರಿತು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರು ಸೋಮವಾರ ಮಾಹಿತಿ ನೀಡಿದರು. ಸರ್ಕಾರದ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆ.ಎಸ್.ಡಿ.ಎಲ್) ಸಂಸ್ಥೆಯ ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಗಾಗಿ ತಮನ್ನಾ ಅವರನ್ನು ಎರಡು ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯಾಗಿ ನೇಮಿಸಲಾಗಿದೆ. ಅವರ ಪ್ರಚಾರ ಕಾರ್ಯ ಮಂಗಳವಾರ ಫೆ.10ರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಇದೇ ವೇಳೆ ಪಾರಂಪರಿಕ ಹೆಮ್ಮೆಯ ಉತ್ಪನ್ನವಾದ ಮೈಸೂರು ಸ್ಯಾಂಡಲ್ ಸೋಪನ್ನು ನವೀನ ರೂಪದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
2030ರ ವೇಳೆಗೆ ಕೆಎಸ್‌ಡಿಎಲ್ ಸಂಸ್ಥೆಯ ವಾರ್ಷಿಕ ವಹಿವಾಟನ್ನು 5,000 ಕೋಟಿ ರೂಪಾಯಿಗಳ ಮಟ್ಟಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಯುವಜನಾಂಗವನ್ನು ತಲುಪುವ ಉದ್ದೇಶದಿಂದ ವ್ಯಾಪಕ ಪ್ರಚಾರ ಅಭಿಯಾನ ಕೈಗೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ 30 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ತಾರಾ ವರ್ಚಸ್ಸಿನ ನಟಿಯನ್ನು ಆಯ್ಕೆ ಮಾಡಲಾಗಿದೆ. ಇದರ ಮೂಲಕ ಉತ್ತರ ಭಾರತದ ಮಾರುಕಟ್ಟೆಯಲ್ಲಿಯೂ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಸಂಸ್ಥೆಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸುವ ಉದ್ದೇಶವಿದೆ ಎಂದು ಪಾಟೀಲ್ ಹೇಳಿದರು.
ಕೆಎಸ್‌ಡಿಎಲ್ ಸಂಸ್ಥೆಗೆ ಶತಮಾನಕ್ಕೂ ಮೀರಿದ ಭವ್ಯ ಪರಂಪರೆ ಇದೆ. ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನ್ ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ಕೈಗಾರಿಕಾ ರಸಾಯನಶಾಸ್ತ್ರಜ್ಞ ಎಸ್.ಜಿ. ಶಾಸ್ತ್ರಿ (ಸೋಪ್ ಶಾಸ್ತ್ರಿ) ಅವರ ದೂರದೃಷ್ಟಿಯಿಂದ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ. ಕಳೆದ ತಿಂಗಳು ಸಾಬೂನು, ಮಾರ್ಜಕ ಹಾಗೂ ಸೌಂದರ್ಯವರ್ಧಕ ವಿಭಾಗಗಳಲ್ಲಿ ಸಾರ್ವಕಾಲಿಕ ಉತ್ಪಾದನೆ ಸಾಧಿಸಲಾಗಿದೆ ಎಂದು ತಿಳಿಸಿದರು.
ಸಂಸ್ಥೆಯಲ್ಲಿ ಪ್ರಸ್ತುತ 57 ವಿಧದ ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಮೈಸೂರು ಸ್ಯಾಂಡಲ್ ಸೋಪ್‌ನಿಂದ ಹಿಡಿದು ಕುಡಿಯುವ ನೀರಿನವರೆಗೂ ಉತ್ಪನ್ನಗಳ ವ್ಯಾಪ್ತಿ ವಿಸ್ತರಿಸಿದೆ. ಪ್ರಚಾರ ರಾಯಭಾರಿಯಾಗಿರುವ ತಮನ್ನಾ ಅವರು ಕೆಎಸ್‌ಡಿಎಲ್ ಉತ್ಪನ್ನಗಳ ಜಾಹೀರಾತುಗಳು ಹಾಗೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಇತರ ಖಾಸಗಿ ಕಂಪನಿಗಳ ಸಮಾನ ಉತ್ಪನ್ನಗಳ ಪ್ರಚಾರದಲ್ಲಿ ಅವರು ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮೈಸೂರು ಸ್ಯಾಂಡಲ್ ಸೋಪ್ ಜೊತೆಗೆ ಶವರ್ ಜೆಲ್, ಟಾಲ್ಕಂ ಪೌಡರ್, ಹ್ಯಾಂಡ್ ವಾಶ್, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೇನಿಯಂ ಸೋಪ್‌ಗಳಿಗೆ ಅಪಾರ ಬೇಡಿಕೆ ಇದೆ. ಪ್ರಚಾರಾರ್ಥ ಸಿದ್ಧಪಡಿಸಿದ ವಿಡಿಯೋಗಳನ್ನು ಮಂಗಳವಾರ ಬಿಡುಗಡೆ ಮಾಡಲಾಗುವುದು. ವಿಜಯಪುರ ಹಾಗೂ ಡಾಬಸಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಹೊಸ ಉತ್ಪಾದನಾ ಘಟಕಗಳನ್ನು ಶೀಘ್ರ ಆರಂಭಿಸುವ ಯೋಜನೆಯಿದ್ದು, ರಫ್ತು ವಹಿವಾಟನ್ನು ದ್ವಿಗುಣಗೊಳಿಸುವ ಗುರಿಯನ್ನೂ ಸಂಸ್ಥೆ ಹೊಂದಿದೆ.
ಕೆಎಸ್‌ಡಿಎಲ್ ಅಧ್ಯಕ್ಷರೂ ಆಗಿರುವ ಶಾಸಕ ಸಿ.ಎಸ್. ಅಪ್ಪಾಜಿ ನಾಡಗೌಡ ಮಾತನಾಡಿ, ಹಳೆಯ ಯಂತ್ರೋಪಕರಣಗಳನ್ನೇ ಬಳಸಿಕೊಂಡು ದಿನಕ್ಕೆ ಮೂರು ಪಾಳಿಗಳಲ್ಲಿ ಉತ್ಪಾದನೆ ನಡೆಯುತ್ತಿದೆ ಎಂದು ಹೇಳಿದರು. ಯೂರೋಪ್ ಮತ್ತು ಮಧ್ಯಪ್ರಾಚ್ಯದ ಮಾರುಕಟ್ಟೆಗಳತ್ತವೂ ಸಂಸ್ಥೆ ಗಮನ ಹರಿಸಿದ್ದು, ಅನಿವಾಸಿ ಕನ್ನಡಿಗರಿಗೂ ಉತ್ಪನ್ನಗಳನ್ನು ತಲುಪಿಸುವ ಪ್ರಯತ್ನ ನಡೆಯಲಿದೆ ಎಂದು ತಿಳಿಸಿದರು.
ಮೈಸೂರು ಸ್ಯಾಂಡಲ್ ಸೋಪ್‌ನ ನಕಲಿ ಉತ್ಪನ್ನಗಳಿಗೆ ಕಡಿವಾಣ ಹಾಕಲಾಗಿದ್ದು, ದಕ್ಷಿಣ ಭಾರತದ ಜೊತೆಗೆ ದೆಹಲಿ ಹಾಗೂ ಮಧ್ಯ ಭಾರತದ ಮಾರುಕಟ್ಟೆ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ. 2025–26ರ ವೇಳೆಗೆ ಸಂಸ್ಥೆಯ ವಹಿವಾಟು 2,000 ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂಬ ವಿಶ್ವಾಸವನ್ನು ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ ವ್ಯಕ್ತಪಡಿಸಿದರು.