ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರಿಕೆ: ಗುಡುಗು ಸಹಿತ ಮಳೆಯ ಮುನ್ಸೂಚನೆ
ರಾಜ್ಯದ ಹಲವು ಜಿಲ್ಲೆಗಳಲ್ಲಿ ತೀವ್ರ ಬಿಸಿಲಿನ ನಡುವೆ ವರುಣ ತಂಪು ಹರಿಸಿದ್ದಾನೆ. ಭಾರತೀಯ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಇಂದು ಕೂಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಯುಗಾದಿ ಹಬ್ಬದ ಸಿದ್ಧತೆಗಳ ನಡುವೆ ನಿನ್ನೆ ಸಂಜೆ ಬೆಂಗಳೂರಿನಲ್ಲಿ ಮಳೆಯಾಗಿದ್ದು, ಇಂದು ಕೂಡ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಇದೇ ವೇಳೆ ರಾಜ್ಯದ 9 ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯ ಭೀತಿ ಹೆಚ್ಚಾಗಿದೆ.
ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಹವಾಮಾನ ಅಸ್ಥಿರವಾಗಿದ್ದು, ಗುಡುಗು ಸಹಿತ ಮಳೆಯ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ. ಧಾರವಾಡ, ಹಾಸನ, ಶಿವಮೊಗ್ಗ ಸೇರಿದಂತೆ ಹಲವೆಡೆ ಈಗಾಗಲೇ ಆಲಿಕಲ್ಲು ಮಳೆಯ ರಭಸ ಹೆಚ್ಚಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಗಳು ಮತ್ತು ಕೃಷಿ ಭೂಮಿಗಳು ಆಲಿಕಲ್ಲಿನಿಂದ ತುಂಬಿ ಹೋಗಿರುವ ವರದಿಗಳಿವೆ.
ಇನ್ನೂ ಮುಂದಿನ 24 ಗಂಟೆಗಳಲ್ಲಿ ದಾವಣಗೆರೆ, ಯಾದಗಿರಿ, ಬೀದರ್, ಕಲಬುರಗಿ, ಬಳ್ಳಾರಿ, ವಿಜಯಪುರ, ರಾಯಚೂರು, ಶಿವಮೊಗ್ಗ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಚ್ಚರಿಕೆ: ರೈತರು ಮತ್ತು ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.