Home ಕ್ರೈಂವಿಮಾನ ದುರಂತ: ಹಿಮ ಬಿರುಗಾಳಿಗೆ ಸಿಲುಕಿ ತಲೆಕೆಳಗಾದ ವಿಮಾನ, ಏಳು ಮಂದಿ ಸಾವು

ವಿಮಾನ ದುರಂತ: ಹಿಮ ಬಿರುಗಾಳಿಗೆ ಸಿಲುಕಿ ತಲೆಕೆಳಗಾದ ವಿಮಾನ, ಏಳು ಮಂದಿ ಸಾವು

by Editor

ಬಂಗೋರ್ (ಅಮೆರಿಕ): ಅಮೆರಿಕದ ಬಂಗೋರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ರಾತ್ರಿ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಭಾರಿ ಹಿಮ ಬಿರುಗಾಳಿಯ ನಡುವೆ ಟೇಕಾಫ್ ಆಗುತ್ತಿದ್ದ ‘ಬಂಬಾರ್ಡಿಯರ್ ಚಾಲೆಂಜರ್ 600’ ಖಾಸಗಿ ಬ್ಯುಸಿನೆಸ್ ಜೆಟ್ ವಿಮಾನವು ನಿಯಂತ್ರಣ ತಪ್ಪಿ ತಲೆಕೆಳಗಾಗಿ ಬಿದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ. ವಿಮಾನದಲ್ಲಿದ್ದ ಎಂಟು ಮಂದಿಯ ಪೈಕಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟೇಷನ್ (FAA) ದೃಢಪಡಿಸಿದೆ.

ನ್ಯೂಇಂಗ್ಲೆಂಡ್ ಸೇರಿದಂತೆ ಅಮೆರಿಕದ ಹಲವು ಭಾಗಗಳು ಭಾರಿ ಶೀತಗಾಳಿ ಮತ್ತು ಹಿಮಪಾತಕ್ಕೆ ತುತ್ತಾಗಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ರವಿವಾರ ರಾತ್ರಿ ಸುಮಾರು 7.45ರ ಸಮಯದಲ್ಲಿ ವಿಮಾನವು ಟೇಕಾಫ್ ಆಗುವ ಹಂತದಲ್ಲಿದ್ದಾಗ ಈ ಅವಘಡ ಸಂಭವಿಸಿದ್ದು, ನೆಲಕ್ಕೆ ಅಪ್ಪಳಿಸಿದ ಕೂಡಲೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿಮಾನ ಸಂಚಾರ ನಿಯಂತ್ರಣ ವ್ಯವಸ್ಥೆಯ ದಾಖಲೆಗಳು ತಿಳಿಸಿವೆ. ದುರಂತದ ಹಿನ್ನೆಲೆಯಲ್ಲಿ ಬೋಸ್ಟನ್‌ನಿಂದ ಸುಮಾರು 200 ಮೈಲು ದೂರದಲ್ಲಿರುವ ಈ ವಿಮಾನ ನಿಲ್ದಾಣವನ್ನು ಸದ್ಯಕ್ಕೆ ಮುಚ್ಚಲಾಗಿದೆ.

ಘಟನೆಯ ಕುರಿತು ಫೆಡರಲ್ ಏವಿಯೇಶನ್ ಅಡ್ಮಿನಿಸ್ಟೇಷನ್ ಮತ್ತು ನ್ಯಾಷನಲ್ ಟ್ರಾನ್ಫೋರ್ಟೇಶನ್ ಸೇಫ್ಟಿ ಬೋರ್ಡ್ (NTSB) ತನಿಖೆ ಆರಂಭಿಸಿವೆ. ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷವೇ ಈ ಅಪಘಾತಕ್ಕೆ ಕಾರಣವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ವಿಮಾನ ನಿರ್ಗಮನದ ವೇಳೆ ಅಪಘಾತಕ್ಕೀಡಾಗಿ ಬೆಂಕಿ ಹತ್ತಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಸಂಪೂರ್ಣ ವರದಿ ನೀಡುವುದಾಗಿ NTSB ಪ್ರಕಟಣೆಯಲ್ಲಿ ತಿಳಿಸಿದೆ.

You may also like

Leave a Comment