Home ದೇಶಉಮ್ರಾ ವೀಸಾ ನಿಯಮದಲ್ಲಿ ಮಹತ್ವದ ಬದಲಾವಣೆ: ಯಾತ್ರಿಕರಿಗೆ ಹೊಸ ಗಡುವು ಫಿಕ್ಸ್ ಮಾಡಿದ ಸೌದಿ ಸಚಿವಾಲಯ

ಉಮ್ರಾ ವೀಸಾ ನಿಯಮದಲ್ಲಿ ಮಹತ್ವದ ಬದಲಾವಣೆ: ಯಾತ್ರಿಕರಿಗೆ ಹೊಸ ಗಡುವು ಫಿಕ್ಸ್ ಮಾಡಿದ ಸೌದಿ ಸಚಿವಾಲಯ

by Editor

ಸೌದಿ ಅರೇಬಿಯಾ ಸರ್ಕಾರವು ಉಮ್ರಾ ಯಾತ್ರಿಕರಿಗಾಗಿ ಹೊಸ ವೀಸಾ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಯಾತ್ರೆಯ ಅವಧಿ ಮತ್ತು ವೀಸಾ ಮಾನ್ಯತೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಹಜ್ ಯಾತ್ರೆಯ ಸಿದ್ಧತೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಸೌದಿ ಸಚಿವಾಲಯದ ಆದೇಶದಂತೆ ಉಮ್ರಾ ವೀಸಾ ಹೊಂದಿರುವ ಯಾತ್ರಿಕರು ದುಲ್-ಖಾದ್ 1, 1447 ಹಿಜ್ರಿಯೊಳಗೆ ಕಡ್ಡಾಯವಾಗಿ ದೇಶವನ್ನು ತೊರೆಯಬೇಕಿದೆ. ಉಮ್ರಾ ವೀಸಾ ಪಡೆದವರು ಸೌದಿಗೆ ಆಗಮಿಸಲು ಶವ್ವಾಲ್ 15, 1447 ಹಿಜ್ರಿಯನ್ನು ಅಂತಿಮ ಗಡುವು ಎಂದು ನಿಗದಿಪಡಿಸಲಾಗಿದೆ.

ವೀಸಾ ಮಾನ್ಯತೆಯ ಅವಧಿಯ ಬಗ್ಗೆಯೂ ಸಚಿವಾಲಯವು ಪ್ರಮುಖ ಸ್ಪಷ್ಟನೆಯನ್ನು ನೀಡಿದೆ. ಸಾಮಾನ್ಯವಾಗಿ ಉಮ್ರಾ ವೀಸಾಗಳು ಮೂರು ತಿಂಗಳವರೆಗೆ ಚಾಲ್ತಿಯಲ್ಲಿರುತ್ತವೆ. ಆದರೆ, ಹೊಸ ನಿಯಮದ ಪ್ರಕಾರ ಯಾತ್ರಿಕರ ವೀಸಾ ಅವಧಿಯು ದುಲ್-ಖಾದ್ 1ರ ನಂತರದ ದಿನಾಂಕದವರೆಗೆ ಇದ್ದರೂ ಸಹ, ಅವರು ಆ ನಿಗದಿಪಡಿಸಿದ ದಿನಾಂಕದ ಒಳಗಾಗಿಯೇ ತಮ್ಮ ತಾಯ್ನಾಡಿಗೆ ಮರಳುವುದು ಕಡ್ಡಾಯವಾಗಿದೆ. ಹಜ್ ಯಾತ್ರಿಕರ ಸುಗಮ ಸಂಚಾರ ಮತ್ತು ವ್ಯವಸ್ಥೆಗಾಗಿ ಈ ಕಾಲಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೌದಿ ಸರ್ಕಾರ ಮುಂದಾಗಿದೆ.

ಪ್ರಸ್ತುತ ಉಮ್ರಾ ವೀಸಾದಡಿ ಮೂರು ತಿಂಗಳವರೆಗೆ ಉಳಿಯುವ ಮೂಲ ನಿಯಮದಲ್ಲಿ ಯಾವುದೇ ಮಾರ್ಪಾಡು ಮಾಡಿಲ್ಲವಾದರೂ, ಗಮ್ಯಸ್ಥಾನ ತಲುಪುವ ಮತ್ತು ನಿರ್ಗಮಿಸುವ ದಿನಾಂಕಗಳ ಬಗ್ಗೆ ಯಾತ್ರಿಕರು ಹೆಚ್ಚಿನ ಜಾಗ್ರತೆ ವಹಿಸಬೇಕಿದೆ. ಇನ್ನು ಗಲ್ಫ್ ರಾಷ್ಟ್ರಗಳಲ್ಲಿ ಈಗ ಚಾಲ್ತಿಯಲ್ಲಿರುವ ಶೀತ ವಾತಾವರಣದ ಹಿನ್ನೆಲೆಯಲ್ಲಿ ಉಮ್ರಾ ಯಾತ್ರಿಕರ ಸಂಖ್ಯೆಯಲ್ಲಿ ತುಸು ಇಳಿಕೆಯಾಗಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹೊಸ ನಿಯಮಗಳು ಯಾತ್ರಿಕರ ಸುಗಮ ಪ್ರಯಾಣಕ್ಕೆ ಪೂರಕವಾಗಲಿವೆ ಎಂದು ಸೌದಿ ಸಚಿವಾಲಯ ತಿಳಿಸಿದೆ.

You may also like

Leave a Comment