Home ಜಿಲ್ಲೆಲಕ್ಕುಂಡಿ ಉತ್ಖನನ: ಪತ್ತೆಯಾದ ಅಪರೂಪದ ಪ್ರಾಚ್ಯಾವಶೇಷ; ಕುಸಿಯುವ ಭೀತಿಯಲ್ಲಿ ಕಾರ್ಮಿಕರು

ಲಕ್ಕುಂಡಿ ಉತ್ಖನನ: ಪತ್ತೆಯಾದ ಅಪರೂಪದ ಪ್ರಾಚ್ಯಾವಶೇಷ; ಕುಸಿಯುವ ಭೀತಿಯಲ್ಲಿ ಕಾರ್ಮಿಕರು

by Editor

ಗದಗ ಜಿಲ್ಲೆಯ ಐತಿಹಾಸಿಕ ತಾಣ ಲಕ್ಕುಂಡಿಯಲ್ಲಿ ಎರಡು ದಿನಗಳ ವಿರಾಮದ ನಂತರ ಮಂಗಳವಾರ ಉತ್ಖನನ ಕಾರ್ಯವು ಮತ್ತೆ ಚುರುಕುಗೊಂಡಿದೆ. ಕಾರ್ಯಾಚರಣೆಯ 10ನೇ ದಿನವಾದ ಇಂದು ಕಳಸದ ಆಕಾರದ ಚಿಕ್ಕ ಪ್ರಾಚ್ಯಾವಶೇಷ ಹಾಗೂ ಪುರಾತನ ಕಾಲದ ಬುನಾದಿ ಪತ್ತೆಯಾಗಿರುವುದು ಸಂಶೋಧಕರಲ್ಲಿ ಹೊಸ ಭರವಸೆ ಮೂಡಿಸಿದೆ. ವಿಶೇಷವಾಗಿ ವೀರಭದ್ರೇಶ್ವರ ದೇವಸ್ಥಾನ ಮತ್ತು ಪುಷ್ಕರಣಿ ನಡುವೆ ಸಂಪರ್ಕ ಕಲ್ಪಿಸುವ ಬುನಾದಿ ಪತ್ತೆಯಾಗಿದ್ದು, ಭೂಮಿಯ ಆಳದಲ್ಲಿ ಆಧುನಿಕ ಪೈಪ್‌ಲೈನ್‌ ಕೂಡ ಕಂಡುಬಂದಿರುವುದು ಈ ಹಿಂದೆ ಇಲ್ಲಿ ಭೂಮಿ ಅಗೆಯಲಾಗಿದೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಇದೇ ವೇಳೆ ಉತ್ಖನನ ನಡೆಯುತ್ತಿರುವ ಸ್ಥಳದಲ್ಲಿ ಸುರಕ್ಷತೆಯ ಆತಂಕ ಎದುರಾಗಿದೆ. 10*10 ಮೀಟರ್‌ ಸುತ್ತಳತೆಯ ಜಾಗದಲ್ಲಿರುವ ಎ-1 ಹಾಗೂ ಬಿ-1 ಗುಂಡಿಗಳಲ್ಲಿ ದೊಡ್ಡ ಮಟ್ಟದ ಬಿರುಕುಗಳು ಕಾಣಿಸಿಕೊಂಡಿವೆ. ಈ ಬಿರುಕಿನ ಕೆಳಭಾಗದಲ್ಲೇ ಸುಮಾರು 35 ಕಾರ್ಮಿಕರು ಕೆಲಸ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೇಲ್ವಿಚಾರಕರು ಬಿರುಕಿನ ಸುತ್ತ ಕಲ್ಲುಗಳನ್ನು ಇರಿಸಿ ಆ ಜಾಗವನ್ನು ಸುರಕ್ಷತಾ ವಲಯ ಎಂದು ಗುರುತಿಸಿದ್ದಾರೆ. ಕಾರ್ಮಿಕರು ಆತಂಕದ ನಡುವೆಯೇ ಕೆಲಸ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಉತ್ಖನನ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಎಸ್‌.ಎಸ್‌. ಪಾಟೀಲ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರ ಗ್ಯಾರಂಟಿ ಯೋಜನೆಗಳ ದಂಧೆಯಲ್ಲಿ ಮುಳುಗಿದ್ದು, ಲಕ್ಕುಂಡಿ ಉತ್ಸವ ನಡೆಸುವ ಮೂಲಕ ಇಲ್ಲಿನ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಲು ವಿಫಲವಾಗಿದೆ ಎಂದು ಟೀಕಿಸಿದರು. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಸಿದ್ದರಾಮಯ್ಯ ಅವರ ಹಿಂದಿನ ಆರ್ಥಿಕ ಶಿಸ್ತು ಈಗ ಕಾಣುತ್ತಿಲ್ಲ ಎಂದು ಆರೋಪಿಸಿದ ಅವರು, ಗೃಹಲಕ್ಷ್ಮಿ ಯೋಜನೆಯ ಹಣ ದುರುಪಯೋಗವಾಗುತ್ತಿದೆ ಎಂದು ದೂರಿದರು.

You may also like

Leave a Comment