ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಭೀಕರ ಘಟನೆಯೊಂದು ನಡೆದಿದೆ. ಕ್ಷುಲ್ಲಕ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸ್ವಂತ ಮಾವನೇ ತನ್ನ ನಾಲ್ಕು ತಿಂಗಳ ಗರ್ಭಿಣಿ ಸೊಸೆಯನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ರೇಖಾ (25) ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದ್ದು, ಆರೋಪಿ ಸಿದ್ದಪ್ಪ ಎಂಬಾತ ತನ್ನ ಸೊಸೆಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕ್ರೌರ್ಯ ಮೆರೆದಿದ್ದಾನೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಮಾವ ಸಿದ್ದಪ್ಪ ದಾಳಿ ನಡೆಸಿದ ಕೂಡಲೇ ತೀವ್ರವಾಗಿ ಗಾಯಗೊಂಡ ರೇಖಾ, ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಬಂದು ನರಳಾಡಿದ್ದಾರೆ. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆಯ ಈ ದಾರುಣ ಅಂತ್ಯ ಗ್ರಾಮಸ್ಥರ ಕಣ್ಣಲ್ಲಿ ನೀರು ತರಿಸಿದ್ದು, ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
ಘಟನೆ ನಡೆದ ತಕ್ಷಣ ಆರೋಪಿ ಸಿದ್ದಪ್ಪ ಪರಾರಿಯಾಗಿದ್ದರೂ, ಕಾರ್ಯಪ್ರವೃತ್ತರಾದ ಕವಿತಾಳ ಠಾಣೆಯ ಪೊಲೀಸರು ಹಂತಕನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ. ಕೌಟುಂಬಿಕ ಜಗಳವೇ ಈ ಹತ್ಯೆಗೆ ಮೂಲ ಕಾರಣ ಎನ್ನಲಾಗಿದ್ದರೂ, ಕೊಲೆಗೆ ನಿಖರವಾದ ಪ್ರಚೋದನೆ ಏನೆಂಬುದು ತನಿಖೆಯ ನಂತರವಷ್ಟೇ ಬಹಿರಂಗವಾಗಬೇಕಿದೆ.