Home ಕ್ರೈಂಮದುವೆಗೆ ಅಡ್ಡಿಯಾದ ಪೋಷಕರನ್ನೇ ಕೊಂದ ನರ್ಸ್: ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಹೆತ್ತವರನ್ನೇ ಮುಗಿಸಿದ ಮಗಳು!

ಮದುವೆಗೆ ಅಡ್ಡಿಯಾದ ಪೋಷಕರನ್ನೇ ಕೊಂದ ನರ್ಸ್: ಅನಸ್ತೇಶಿಯಾ ಇಂಜೆಕ್ಷನ್ ನೀಡಿ ಹೆತ್ತವರನ್ನೇ ಮುಗಿಸಿದ ಮಗಳು!

by Editor

ವಿಕಾರಾಬಾದ್ (ತೆಲಂಗಾಣ): ಪ್ರೀತಿಸಿದವನ ಜೊತೆ ಮದುವೆಗೆ ಪೋಷಕರು ಒಪ್ಪಲಿಲ್ಲ ಎಂಬ ಕಾರಣಕ್ಕೆ ನರ್ಸ್ ಕೆಲಸ ಮಾಡುತ್ತಿದ್ದ ಮಗಳೊಬ್ಬಳು ಹೆತ್ತವರಿಗೇ ಅನಸ್ತೇಶಿಯಾ ನೀಡಿ ಕೊಲೆ ಮಾಡಿರುವ ಭೀಕರ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಯಾಚಾರಂ ಗ್ರಾಮದಲ್ಲಿ ನಡೆದಿದೆ. ವೃತ್ತಿಪರ ನರ್ಸ್ ಆಗಿರುವ 25 ವರ್ಷದ ನಕ್ಕಲ ಸುರೇಖಾ ಎಂಬಾಕೆಯೇ ತನ್ನ ತಂದೆ ದಶರಥ್ (58) ಮತ್ತು ತಾಯಿ ಲಕ್ಷ್ಮಿ (54) ಅವರನ್ನು ಸಾಯಿಸಿದ ಆರೋಪಿ. ವೃತ್ತಿಯಲ್ಲಿ ತನಗಿದ್ದ ವೈದ್ಯಕೀಯ ಜ್ಞಾನವನ್ನೇ ಹೆತ್ತವರ ಪ್ರಾಣ ತೆಗೆಯಲು ಬಳಸಿಕೊಂಡಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಸೋಶಿಯಲ್ ಮೀಡಿಯಾ ಇನ್ಸ್‌ಟಾಗ್ರಾಮ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಸುರೇಖಾ ಪ್ರೀತಿಸುತ್ತಿದ್ದಳು. ಆದರೆ ಆತ ಬೇರೆ ಜಾತಿಗೆ ಸೇರಿದವನಾಗಿದ್ದರಿಂದ ಪೋಷಕರು ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಸುರೇಖಾ, ಪೋಷಕರು ಹೋದರೆ ಮಾತ್ರ ತನ್ನ ಪ್ರೇಮ ವಿವಾಹ ಸಾಧ್ಯ ಎಂದು ಭಾವಿಸಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಳು. ಮೈಕೈ ನೋವೆಂದು ಹೇಳುತ್ತಿದ್ದ ಪೋಷಕರಿಗೆ ಚಿಕಿತ್ಸೆಯ ನೆಪದಲ್ಲಿ ‘ಆರ್ಟಾಸಿಲ್’ (Artacil) ಎಂಬ ನಿದ್ರಾಜನಕ ಔಷಧವನ್ನು ಅತಿಯಾದ ಪ್ರಮಾಣದಲ್ಲಿ (High Dose) ಇಂಜೆಕ್ಟ್ ಮಾಡಿದ್ದಾಳೆ.

ಜನವರಿ 24ರ ರಾತ್ರಿ ಇಂಜೆಕ್ಷನ್ ನೀಡಿದ ನಂತರ ಪೋಷಕರಿಬ್ಬರೂ ಪ್ರಜ್ಞೆ ಕಳೆದುಕೊಂಡಿದ್ದರು. ಆ ಸಮಯದಲ್ಲಿ ತನಗೇನೂ ತಿಳಿಯದವಳಂತೆ ತನ್ನ ಸಹೋದರನಿಗೆ ಮಾಹಿತಿ ನೀಡಿ, ಇಬ್ಬರೂ ಸೇರಿ ಪೋಷಕರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ನರ್ಸಿಂಗ್ ಕೌಶಲ ಬಳಸಿ ಕೊಲೆ ಮಾಡಿದರೆ ತನ್ನ ಮೇಲೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬುದು ಸುರೇಖಾಳ ಲೆಕ್ಕಾಚಾರವಾಗಿತ್ತು.

ಆದರೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮನೆಯಲ್ಲಿ ರಕ್ತದ ಕಲೆಗಳಿರುವ ಸಿರಿಂಜ್ ಮತ್ತು ಇಂಜೆಕ್ಷನ್ ಬಾಟಲಿಗಳು ಪತ್ತೆಯಾಗಿವೆ. ಇದರಿಂದ ಅನುಮಾನಗೊಂಡ ಪೊಲೀಸರು ಸುರೇಖಾಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ. ಪೋಷಕರು ಮದುವೆಗೆ ಒಪ್ಪದಿದ್ದಕ್ಕೆ ತಾನೇ ಅಧಿಕ ಪ್ರಮಾಣದ ಅನಸ್ತೇಶಿಯಾ ನೀಡಿ ಕೊಲೆ ಮಾಡಿರುವುದಾಗಿ ಆಕೆ ಹೇಳಿಕೆ ನೀಡಿದ್ದಾಳೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

You may also like

Leave a Comment