ಗದಗ: ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು 12ನೇ ದಿನಕ್ಕೆ ಕಾಲಿಟ್ಟಿದ್ದು, ಪುರಾತತ್ವ ಇಲಾಖೆಯ ಸಂಶೋಧನೆಯಲ್ಲಿ ಅತ್ಯಂತ ಅಪರೂಪದ ‘ತ್ರಿಮುಖ ನಾಗಶಿಲೆ’ ಹಾಗೂ ಕಲ್ಲಿನ ಮುಕುಟಮಣಿ ಪತ್ತೆಯಾಗಿದೆ. ಗುರುವಾರ ನಡೆದ ಉತ್ಖನನದ ವೇಳೆ ಅಡಕೆ ಆಕಾರದ, ಕೆಳಭಾಗದಲ್ಲಿ ರಂಧ್ರವಿರುವ ಮುಕುಟಮಣಿ ದೊರೆತಿದ್ದು, ಇದು ಹಿಂದಿನ ಕಾಲದ ವಿಗ್ರಹಗಳ ಕಿರೀಟ ಅಥವಾ ಅಲಂಕಾರಿಕ ವಸ್ತುವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಶೋಧನೆಯು ಲಕ್ಕುಂಡಿಯ ಕಲಾ ವೈಭವದ ಮೇಲೆ ಹೊಸ ಬೆಳಕು ಚೆಲ್ಲಿದೆ.
ಉತ್ಖನನದ ಮತ್ತೊಂದು ಗುಂಡಿಯಲ್ಲಿ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತಲಾದ ಐತಿಹಾಸಿಕ ‘ತ್ರಿಮುಖ ನಾಗಶಿಲೆ’ ಪತ್ತೆಯಾಗಿದ್ದು, ಇದು ಸ್ಥಳೀಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಗ್ರಾಮೀಣ ಭಾಗದ ಜನಪದ ನಂಬಿಕೆಗಳ ಪ್ರಕಾರ, ಇಂತಹ ಬಹುಮುಖಿ ನಾಗಶಿಲೆಗಳು ಇರುವ ಕಡೆ ‘ನಿಧಿ’ ಇರುತ್ತದೆ ಹಾಗೂ ಇವು ನಿಧಿಯ ಕಾವಲುಗಾರನ ಸಂಕೇತಗಳಾಗಿರುತ್ತವೆ ಎಂಬ ಬಲವಾದ ನಂಬಿಕೆಯಿದೆ. ಹೀಗಾಗಿ ಈ ನಾಗಶಿಲೆಯ ಪತ್ತೆಯು ಜನಪದ ಕಥೆಗಳಿಗೆ ಮರುಜೀವ ನೀಡಿದಂತಾಗಿದ್ದು, ಇತಿಹಾಸದ ನಿಗೂಢತೆಗಳನ್ನು ಕೆದಕಲು ಸಂಶೋಧಕರಿಗೆ ಹೊಸ ಆಯಾಮ ನೀಡಿದೆ.
ಲಕ್ಕುಂಡಿಯ ಈ ಉತ್ಖನನವು ಈಗ ಕೇವಲ ಸಂಶೋಧನೆಗೆ ಸೀಮಿತವಾಗದೆ ಪ್ರವಾಸಿಗರ ಹಾಗೂ ವಿದ್ಯಾರ್ಥಿಗಳ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ. ಗುರುವಾರ ಧಾರವಾಡದ ನವಲಗುಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ಸ್ಥಳಕ್ಕೆ ಭೇಟಿ ನೀಡಿ, ಉತ್ಖನನದ ನೈಜ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಮಣ್ಣಿನ ಪದರಗಳ ನಡುವೆ ಅಡಗಿದ್ದ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತಿರುವುದನ್ನು ಕಂಡು ಬೆರಗಾದ ವಿದ್ಯಾರ್ಥಿಗಳು, ಲಕ್ಕುಂಡಿಯ ಶ್ರೀಮಂತ ಪರಂಪರೆಯ ಬಗ್ಗೆ ಪ್ರತ್ಯಕ್ಷ ಮಾಹಿತಿ ಪಡೆದರು.