117
ಕಡೂರು ತಾಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ಅಧಿಕಾರಿಯೊಬ್ಬರ ಅಮಾನವೀಯ ವರ್ತನೆಯಿಂದಾಗಿ ವಿದ್ಯಾರ್ಥಿನಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. 10ನೇ ತರಗತಿಯ ಪರೀಕ್ಷೆಯಲ್ಲಿ 500ಕ್ಕೆ 93 ಅಂಕಗಳನ್ನು ಪಡೆದಿದ್ದ ವಿದ್ಯಾರ್ಥಿನಿಯನ್ನು ಕಂಡು, “ಇಷ್ಟು ಕಡಿಮೆ ಅಂಕ ಪಡೆದರೆ ಪಾಸ್ ಆಗ್ತೀಯಾ?” ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಹೀಯಾಳಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಗುರಿ ತಲುಪಲು ಪ್ರೋತ್ಸಾಹ ನೀಡಬೇಕಾದ ಅಧಿಕಾರಿಯೇ ಸಾರ್ವಜನಿಕವಾಗಿ ಅವಮಾನ ಮಾಡಿದ್ದರಿಂದ ಮನನೊಂದ ಬಾಲಕಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಾಲಕಿಯ ಸಾವಿಗೆ ಕಾರಣರಾದ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಶೈಕ್ಷಣಿಕ ಒತ್ತಡ ಹಾಗೂ ಮಕ್ಕಳ ಭಾವನೆಗಳ ಜೊತೆ ಆಟವಾಡುವ ಇಂತಹ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.