ಮಂಗಳೂರು: ಕೇರಳ ಗಡಿಭಾಗ ಮಂಜೇಶ್ವರದ ತೂಮಿನಾಡಿನಲ್ಲಿ ನಡೆದ ಭೀಕರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಮತ್ತೊಂದು ದುರಂತ ಸಂಭವಿಸಿದೆ. ತಂದೆ ಮತ್ತು ಚಿಕ್ಕಪ್ಪನ ನಡುವಿನ ಜಗಳ ಬಿಡಿಸಲು ಹೋಗಿ ಮೃತಪಟ್ಟ ಜುಮೈಲಾ (17) ಅವರ ಬೆನ್ನಲ್ಲೇ, ಗಂಭೀರವಾಗಿ ಗಾಯಗೊಂಡಿದ್ದ ಚಿಕ್ಕಪ್ಪ ಶೇಕುಂಞ (55) ಅವರು ಇಂದು (ಫೆ.3) ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಘಟನೆಯ ವಿವರ: ಆಸ್ತಿ ವಿಚಾರವಾಗಿ ಆರೋಪಿ ಉಮರ್ ಫಾರೂಕ್ ಮತ್ತು ಆತನ ನಾದಿನಿಯ ಪತಿ ಶೇಕುಂಞ ನಡುವೆ ವೈಮನಸ್ಸು ಇತ್ತು ಎನ್ನಲಾಗಿದೆ. ಸೋಮವಾರ ಸಂಜೆ ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ವೇಳೆ ಉಮರ್ ಫಾರೂಕ್ ಮಾರಕಾಸ್ತ್ರದಿಂದ ಶೇಕುಂಞ ಅವರ ಮೇಲೆ ದಾಳಿ ಮಾಡಿದ್ದಾನೆ. ತಂದೆಯ ಕೃತ್ಯವನ್ನು ತಡೆಯಲು ಹೋದ ಮಗಳು ಜುಮೈಲಾ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಶೇಕುಂಞ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಇಂದು ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಉಮರ್ ಫಾರೂಕ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಒಂದೇ ಕುಟುಂಬದ ಇಬ್ಬರ ಸಾವಿನಿಂದ ತೂಮಿನಾಡು ಪರಿಸರದಲ್ಲಿ ಶೋಕ ಮಡುಗಟ್ಟಿದೆ.