47
ಮಂಗಳೂರು: ನಗರದಲ್ಲಿ ಹೆಲಿಕಾಪ್ಟರ್‌ಗಳ ಸುಗಮ ಸಂಚಾರಕ್ಕಾಗಿ ಶಾಶ್ವತ ಹೆಲಿಪ್ಯಾಡ್ ನಿರ್ಮಿಸುವ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಸೂಕ್ತ ಜಾಗ ನಿಗದಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್‌ವಿ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ವಿಷಯ ಹಂಚಿಕೊಂಡರು.
ಮಂಗಳೂರು ಪ್ರಮುಖ ವೈದ್ಯಕೀಯ ಕೇಂದ್ರವಾಗಿರುವುದರಿಂದ ವೈದ್ಯಕೀಯ ತುರ್ತು ಸೇವೆಗಳಿಗೆ, ವಿಐಪಿಗಳ ಭೇಟಿಗೆ ಹಾಗೂ ಹೆಲಿ-ಟೂರಿಸಂ ಅಭಿವೃದ್ಧಿಗೆ ಪ್ರತ್ಯೇಕ ಹೆಲಿಪ್ಯಾಡ್ ಅತ್ಯಗತ್ಯವಾಗಿದೆ. ಪ್ರಸ್ತುತ ಶಾಶ್ವತ ವ್ಯವಸ್ಥೆ ಇಲ್ಲದ ಕಾರಣ ವಿಐಪಿಗಳು ಆಗಮಿಸುವಾಗ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಶಾಶ್ವತ ಹೆಲಿಪ್ಯಾಡ್ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಚೇತರಿಕೆ ಸಿಗಲಿದ್ದು, ಶೀಘ್ರವೇ ಸ್ಥಳ ಗುರುತಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆಶಯ ವ್ಯಕ್ತಪಡಿಸಿದರು.