ಒಪ್ಪಿತ ಸಂಬಂಧಗಳಲ್ಲಿ ಬಿರುಕು ಮೂಡಿದ ನಂತರ ಅತ್ಯಾಚಾರ ಪ್ರಕರಣ ದಾಖಲಿಸುವ ಮೂಲಕ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ವಿವಾಹಿತ ಮಹಿಳೆಯೊಬ್ಬಳು ಪರಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಿ, ನಂತರ ಸಂಬಂಧ ಹದಗೆಟ್ಟಾಗ ‘ಮದುವೆಯ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾನೆ’ ಎಂಬ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭೂಯಾನ್ ಅವರ ಪೀಠ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ವಕೀಲರೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ.
ವಿವಾಹವು ಕಾನೂನುಬದ್ಧವಾಗಿ ಜಾರಿಯಲ್ಲಿರುವಾಗ ಮಹಿಳೆಗೆ ಮತ್ತೊಂದು ಮದುವೆಯಾಗಲು ಅರ್ಹತೆ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಪುರುಷ ನೀಡಿದ ಮದುವೆಯ ಭರವಸೆಯನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಲು ಅಥವಾ ಅದನ್ನು ಅತ್ಯಾಚಾರಕ್ಕೆ ಆಧಾರವಾಗಿ ಬಳಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸಂಬಂಧವು ಒಪ್ಪಿತವಾಗಿದ್ದಾಗ ಮತ್ತು ಕಾನೂನಿನ ಪ್ರಕಾರ ಎರಡನೇ ವಿವಾಹ ಅಸಾಧ್ಯವೆಂದು ತಿಳಿದಿದ್ದರೂ ದೂರು ನೀಡುವುದು ಕಾನೂನಿನ ದುರ್ಬಳಕೆಯಾಗುತ್ತದೆ ಎಂದು ಪೀಠವು ಈ ಮೂಲಕ ಗಂಭೀರವಾಗಿ ಎಚ್ಚರಿಸಿದೆ.