ನಾಳೆಯಿಂದ ಸಾರಿಗೆ ನೌಕರರ ಮುಷ್ಕರ: ರಾಜ್ಯಾದ್ಯಂತ ಬಸ್ ಓಡಾಟದಲ್ಲಿ ವ್ಯತ್ಯಯ ಸಾಧ್ಯತೆ
ಬೆಂಗಳೂರು, ಏ.20: ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ನಾಳೆಯಿಂದ ಮತ್ತೆ ಮುಷ್ಕರಕ್ಕೆ ಮುಂದಾಗಿದ್ದು, ರಾಜ್ಯದಾದ್ಯಂತ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.
ವೇತನ ಪರಿಷ್ಕರಣೆ ಹಾಗೂ ಹಿಂಬಾಕಿ ಹಣ ಪಾವತಿಗೆ ಆಗ್ರಹಿಸಿ ನೌಕರರು ಹೋರಾಟ ತೀವ್ರಗೊಳಿಸಲು ಸಜ್ಜಾಗಿದ್ದಾರೆ. ಸರ್ಕಾರ ಶೇಕಡಾ 7ರಷ್ಟು ವೇತನ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದರೆ, ನೌಕರರು ಶೇಕಡಾ 25ರಷ್ಟು ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆ ಮಾತುಕತೆ ವಿಫಲವಾಗಿರುವುದರಿಂದ ಅನಿರ್ದಿಷ್ಟಾವಧಿ ಧರಣಿಗೆ ಕರೆ ನೀಡಲಾಗಿದೆ.
ನೌಕರರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸತ್ಯಾಗ್ರಹ ನಡೆಸಲಿದ್ದು, ಸಾವಿರಾರು ಮಂದಿ ಕರ್ತವ್ಯಕ್ಕೆ ಗೈರಾಗುವ ಸಾಧ್ಯತೆ ಇದೆ. ಇದರಿಂದ ಸಾರ್ವಜನಿಕರಿಗೆ ಬಸ್ ಸೇವೆಯಲ್ಲಿ ತೊಂದರೆ ಎದುರಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಇತ್ತ ನಿಗಮಗಳು ಕಡ್ಡಾಯ ಹಾಜರಾತಿಗೆ ಸೂಚನೆ ನೀಡಿ, ಅನಧಿಕೃತವಾಗಿ ರಜೆ ಪಡೆದು ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಸಸ್ಪೆಂಡ್ ಮಾಡುವ ಎಚ್ಚರಿಕೆ ನೀಡಿದ್ದಾರೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನೌಕರರ ಪ್ರಮುಖ ಬೇಡಿಕೆಗಳು:
2020ರಿಂದ 2023ರವರೆಗೆ (38 ತಿಂಗಳು) ಬಾಕಿ ವೇತನ ಪಾವತಿ 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಜಾರಿ
ಸರ್ಕಾರದ ಪ್ರಸ್ತಾಪ:
2026ರ ಜನವರಿ 1ರಿಂದವೇ ವೇತನ ಪರಿಷ್ಕರಣೆ 38 ತಿಂಗಳ ಬದಲು 18-20 ತಿಂಗಳ ಹಿಂಬಾಕಿ ಪಾವತಿ
ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿರುವ ನೌಕರರು ಹೋರಾಟ ಹಿಂತೆಗೆದುಕೊಳ್ಳುವ ಲಕ್ಷಣಗಳು ಕಾಣಿಸದ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಸಾರಿಗೆ ಸೇವೆ ಮತ್ತಷ್ಟು ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.