ಅಬುಧಾಬಿ/ಉಡುಪಿ: ಕರಾವಳಿಯ ಯುವಕನೋರ್ವ ರಾತ್ರೋರಾತ್ರಿ ಕೋಟ್ಯಧಿಪತಿಯಾದ ಅಪರೂಪದ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಉದ್ಯಾವರ ಮೂಲದ 33 ವರ್ಷದ ಶಾಂತನು ಶೆಟ್ಟಿಗಾರ್ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಡೆಸುವ ಪ್ರತಿಷ್ಠಿತ ‘ಬಿಗ್ ಟಿಕೆಟ್’ ಲಾಟರಿ ಡ್ರಾದಲ್ಲಿ ಬರೋಬ್ಬರಿ 20 ಮಿಲಿಯನ್ ದಿರಹಾಮ್ (ಸುಮಾರು 49 ಕೋಟಿ ರೂಪಾಯಿ) ಬಂಪರ್ ಬಹುಮಾನ ಗೆದ್ದಿದ್ದಾರೆ.
ಪ್ರಸ್ತುತ ಒಮನ್‌ನ ಮಸ್ಕತ್‌ನಲ್ಲಿ ರಿಟೇಲ್ ಶಾಪ್ ಇನ್‌ಚಾರ್ಜ್ ಆಗಿ ಕೆಲಸ ಮಾಡುತ್ತಿರುವ ಶಾಂತನು, ಕಳೆದ ಐದು ವರ್ಷಗಳಿಂದ ಬಿಗ್ ಟಿಕೆಟ್ ಲಾಟರಿಯಲ್ಲಿ ಅದೃಷ್ಟ ಪರೀಕ್ಷಿಸುತ್ತಿದ್ದರು. ಜನವರಿ 20 ರಂದು ತಮ್ಮ ಸ್ನೇಹಿತನೊಂದಿಗೆ ಸೇರಿ ಖರೀದಿಸಿದ್ದ 305810 ಸಂಖ್ಯೆಯ ಟಿಕೆಟ್‌ಗೆ ಈ ಬೃಹತ್ ಮೊತ್ತ ಒಲಿದಿದೆ. ನಿಯಮದಂತೆ ಈ ಬಹುಮಾನದ ಮೊತ್ತವನ್ನು ಶಾಂತನು ಮತ್ತು ಅವರ ಸ್ನೇಹಿತ ಹಂಚಿಕೊಳ್ಳಲಿದ್ದಾರೆ.
ವಿಶೇಷವೆಂದರೆ, ಲಾಟರಿ ಸಂಸ್ಥೆಯಿಂದ ಬಂದ ಮೊದಲ ಎರಡು ಕರೆಗಳನ್ನು ಶಾಂತನು ನಿರ್ಲಕ್ಷಿಸಿದ್ದರು. ಮೂರನೇ ಬಾರಿ ಕರೆ ಸ್ವೀಕರಿಸಿದಾಗ ಅವರಿಗೆ ತಾವು ಕೋಟ್ಯಧಿಪತಿಯಾದ ಸುದ್ದಿ ತಿಳಿದು ಅಚ್ಚರಿಗೊಂಡರು. ಇತ್ತೀಚೆಗಷ್ಟೇ ಮಗುವಿನ ತಂದೆಯಾಗಿರುವ ಶಾಂತನು, ಈ ಅದೃಷ್ಟವನ್ನು ಕುಟುಂಬದೊಂದಿಗೆ ಸಂಭ್ರಮಿಸಿದ್ದಾರೆ. ಯುಎಇಯ ಅತ್ಯಂತ ಜನಪ್ರಿಯ ‘ಬಿಗ್ ಟಿಕೆಟ್’ ರಾಫಲ್ ಡ್ರಾ ಮೂಲಕ ಅನೇಕ ಭಾರತೀಯರು ಈ ಹಿಂದೆ ಕೋಟ್ಯಧಿಪತಿಗಳಾಗಿದ್ದು, ಇದೀಗ ಉದ್ಯಾವರದ ಯುವಕ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.