Home ರಾಜಕೀಯಸಾರಿಗೆ ನೌಕರರಿಗೆ ಸಿಹಿ ಸುದ್ದಿ: ₹1,239 ಕೋಟಿ ಬಿಡುಗಡೆ, ವೇತನ ಪರಿಷ್ಕರಣೆಗೂ ಸರ್ಕಾರ ಒಪ್ಪಿಗೆ

ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ₹1,239 ಕೋಟಿ ಬಿಡುಗಡೆ, ವೇತನ ಪರಿಷ್ಕರಣೆಗೂ ಸರ್ಕಾರ ಒಪ್ಪಿಗೆ

Karnataka Govt Releases ₹1,239 Crore, Approves Salary Revision for Transport Employees

by Editor

 

ಬೆಂಗಳೂರು, ಫೆಬ್ರವರಿ 18: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ನೌಕರರು “ಬೆಂಗಳೂರು ಚಲೋ” ಪ್ರತಿಭಟನೆಗೆ ಕರೆ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾರಿಗೆ ನೌಕರರ ವೇತನ ಹಿಂಬಾಕಿ ಪಾವತಿಗಾಗಿ ಸರ್ಕಾರ ಒಟ್ಟು ₹1,239 ಕೋಟಿ ರೂಪಾಯಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಜೊತೆಗೆ ವೇತನ ಪರಿಷ್ಕರಣೆಯಿಗೂ ಅಧಿಕೃತ ಆದೇಶ ಜಾರಿಗೊಳಿಸಿದೆ.

ಸಾರಿಗೆ ನೌಕರರು 38 ತಿಂಗಳ ವೇತನ ಹಿಂಬಾಕಿ ಪಾವತಿಗೆ ಬೇಡಿಕೆ ಇಟ್ಟಿದ್ದರೂ, ಸರ್ಕಾರವು 26 ತಿಂಗಳ ವೇತನ ಹಿಂಬಾಕಿ ನೀಡಲು ತೀರ್ಮಾನಿಸಿದೆ. ಈ ಮೂಲಕ ಹಲವು ವರ್ಷಗಳಿಂದ ಬಾಕಿಯಾಗಿದ್ದ ವೇತನ ಸಮಸ್ಯೆಗೆ ಭಾಗಶಃ ಪರಿಹಾರ ದೊರಕಲಿದೆ.

ಇನ್ನು, 2024ರ ಜನವರಿ 1ರಿಂದ ಜಾರಿಗೆ ಬರಬೇಕಿದ್ದ ವೇತನ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡಿದ್ದು, 2025ರ ಮಾರ್ಚ್ 1ರಿಂದ ಪರಿಷ್ಕೃತ ವೇತನ ಜಾರಿಗೆ ತರಲು ಆದೇಶಿಸಿದೆ. ಈ ಕುರಿತು ಸಾರಿಗೆ ಸಚಿವರು ಹಾಗೂ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಮಹತ್ವದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ.

ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಕ್ರಮ ಕೈಗೊಂಡಿದ್ದು, ಪ್ರತಿಭಟನೆಗೂ ಮುನ್ನವೇ ಈ ನಿರ್ಧಾರ ಪ್ರಕಟಿಸಲಾಗಿದೆ. ಸರ್ಕಾರದ ಈ ಘೋಷಣೆಯಿಂದ ಸಾರಿಗೆ ನೌಕರರಲ್ಲಿ ತಾತ್ಕಾಲಿಕ ನೆಮ್ಮದಿ ಮೂಡಿದರೆ, ಮುಂದಿನ ಹಂತದಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳುವ ಕುರಿತು ನೌಕರರ ಸಂಘಟನೆಗಳು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ವೇತನ ಹೆಚ್ಚಳ, ಹಿಂಬಾಕಿ ಪಾವತಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ “ಬೆಂಗಳೂರು ಚಲೋ” ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಈಗ ಸರ್ಕಾರದ ಈ ಘೋಷಣೆ ಪ್ರತಿಭಟನೆಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕಾದುನೋಡಬೇಕಾಗಿದೆ.

You may also like

Leave a Comment