ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ್ದಕ್ಕೆ ಅಸಮಾಧಾನ? ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ಸಾಧ್ಯತೆ
ಬೆಂಗಳೂರು, ಜೂನ್ 5: ಮುಖ್ಯಮಂತ್ರಿ ನೇತೃತ್ವದ ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆ ಬಳಿಕ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಬೆಳವಣಿಗೆ ನಡೆದಿದೆ. ಜಲಸಂಪನ್ಮೂಲ ಖಾತೆ ಪಡೆದಿರುವ ಹಿರಿಯ ಸಚಿವ ಅವರು ತಮಗೆ ನಿರೀಕ್ಷಿತ ಬೆಂಗಳೂರು ನಗರಾಭಿವೃದ್ಧಿ ಖಾತೆ ದೊರೆಯದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಕುರಿತು ಮಾತುಕತೆಗಳು ಜೋರಾಗಿವೆ.
ಮೂಲಗಳ ಪ್ರಕಾರ, ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವಂತೆ ಬೇಡಿಕೆ ಇಟ್ಟಿದ್ದ ರಾಮಲಿಂಗಾ ರೆಡ್ಡಿ ಅವರು ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಆದರೆ ಖಾತೆ ಬದಲಾವಣೆಗೆ ಪಕ್ಷದ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ ಎಂಬ ಸಮಜಾಯಿಷಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಇದರ ನಡುವೆ, ತಮ್ಮ ಕ್ಷೇತ್ರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, “ವಾಪಸ್ ಅವ್ರಿಗೆ ಕೊಟ್ಟುಬಿಡ್ತೇನೆ” ಎಂಬ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಸಚಿವ ಸ್ಥಾನ ಅಥವಾ ಖಾತೆ ಕುರಿತು ಅಸಮಾಧಾನದ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ ಈ ಕುರಿತು ಅಧಿಕೃತವಾಗಿ ಯಾವುದೇ ರಾಜೀನಾಮೆ ಸಲ್ಲಿಕೆಯ ಮಾಹಿತಿ ಹೊರಬಿದ್ದಿಲ್ಲ. ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕರ ಮುಂದಿನ ನಡೆ ಏನಿರಲಿದೆ ಎಂಬುದರತ್ತ ರಾಜ್ಯ ರಾಜಕೀಯದ ಗಮನ ನೆಟ್ಟಿದೆ.