
ಚೆನ್ನೈ: ದಕ್ಷಿಣ ಭಾರತದ ವಿಶಿಷ್ಟ ಮಹಿಳೆಯರ ಸಾಧನೆಗಳನ್ನು ಆಚರಿಸುವ ಡಿಜಿಟಲ್ ಸಂಚಿಕೆ ‘ಟ್ವೆಲ್ ಮ್ಯಾಗಜೀನ್’ (TWELL Magazine) ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಸೌತ್ ಇಂಡಿಯಾ ವುಮೆನ್ ಅಚೀವರ್ಸ್ ಅವಾರ್ಡ್ಸ್ (SIWAA) – 2026’ ಪ್ರಶಸ್ತಿಗೆ ಚಿಕ್ಕಮಗಳೂರಿನ ಪ್ರತಿಭಾನ್ವಿತೆ ಅಂಕಿತಾ ಕೆ ಭಾಜನರಾಗಿದ್ದಾರೆ.
ಮಾರ್ಚ್ 8 ರಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಅಂಕಿತಾ ಅವರಿಗೆ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಈ ಗೌರವವನ್ನು ನೀಡಿ ಪುರಸ್ಕರಿಸಲಾಯಿತು. ಕಠಿಣ ಅಭ್ಯಾಸ ಮತ್ತು ಶೈಕ್ಷಣಿಕ ಸಾಧನೆಯ ಮೂಲಕ ಭರತನಾಟ್ಯ ನೃತ್ಯಗಾರ್ತಿಯಾಗಿ ಗುರುತಿಸಿಕೊಂಡಿರುವ ಇವರು, ಭಾರತ ಹಾಗೂ ವಿದೇಶಗಳ ವಿವಿಧ ವೇದಿಕೆಗಳಲ್ಲಿ ಪ್ರದರ್ಶನ ನೀಡುವ ಮೂಲಕ ಭಾರತೀಯ ಪರಂಪರಾಗತ ನೃತ್ಯಕಲೆಗಳ ಸಮೃದ್ಧಿಯನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ.
ಅಂಕಿತಾ ಅವರು ಕಲೆಗಾಗಿ ನೀಡುತ್ತಿರುವ ಸಮರ್ಪಣೆ, ರಾಜ್ಯ ಮಟ್ಟದ ಗೌರವಗಳು ಹಾಗೂ ಭಾರತೀಯ ಕಲೆಗಳನ್ನು ಕಾಪಾಡಿ ಬೆಳೆಸುವಲ್ಲಿ ಅವರ ಬದ್ಧತೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಇವರು ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಕೆ. ನಡ್ಕ ಮತ್ತು ಶ್ರೀಮತಿ ಮೀನಾಕ್ಷಿ ದಂಪತಿಯ ಪುತ್ರಿಯಾಗಿದ್ದಾರೆ. ಅಂಕಿತಾ ಅವರ ಈ ಸಾಧನೆಗೆ ನಾಡಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.