Home ಜಿಲ್ಲೆಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧನ: ಜಾಮೀನು ರಹಿತ ವಾರೆಂಟ್ ಹಿನ್ನೆಲೆ ಕ್ರಮ

ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಬಂಧನ: ಜಾಮೀನು ರಹಿತ ವಾರೆಂಟ್ ಹಿನ್ನೆಲೆ ಕ್ರಮ

by Editor

ಬೆಂಗಳೂರು: ಹಿಂದೂ ಪರ ಕಾರ್ಯಕರ್ತ ಹಾಗೂ ‘ರಾಷ್ಟ್ರ ರಕ್ಷಣಾ ಪಡೆ’ಯ ಸಂಚಾಲಕ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಗೋ ಮಾಂಸ ಸಾಗಾಟದ ವೇಳೆ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ವಾರೆಂಟ್ (NBW) ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

ಗೋವು ಅಥವಾ ಗೋ ಮಾಂಸ ಸಾಗಾಟದ ವೇಳೆ ಚಾಲಕನ ಮೇಲೆ ಹಲ್ಲೆ ನಡೆಸಿದ ಗಂಭೀರ ಆರೋಪ ಎದುರಿಸುತ್ತಿದ್ದ ಪುನೀತ್, ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸತತವಾಗಿ ಗೈರುಹಾಜರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ವಾರೆಂಟ್ ಜಾರಿಗೊಳಿಸಿತ್ತು. ಈ ಹಿಂದೆ ಗೋ ರಕ್ಷಣೆಯ ಹೆಸರಿನಲ್ಲಿ ನಡೆದ ಹಲವು ಘಟನೆಗಳಲ್ಲಿ ಇವರ ಹೆಸರು ಕೇಳಿಬಂದಿದ್ದು, ಒಂದು ಪ್ರಕರಣದಲ್ಲಿ ಚಾಲಕನ ಸಾವಿಗೂ ಇವರೇ ಕಾರಣ ಎಂಬ ಗಂಭೀರ ಆರೋಪಗಳೂ ದಾಖಲಾಗಿದ್ದವು.

ಕಳೆದ ಡಿಸೆಂಬರ್ 18ರಂದು ಬನ್ನೇರುಘಟ್ಟ ವ್ಯಾಪ್ತಿಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರೆಂದು ಆರೋಪಿಸಿ ಶೆಡ್‌ಗಳಿಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣದಲ್ಲೂ ಇವರು ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಚಿತ್ರೀಕರಿಸಿ ಹರಿಯ ಬಿಡುವ ಮೂಲಕ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗುತ್ತಿದ್ದ ಪುನೀತ್ ಕೆರೆಹಳ್ಳಿ, ಇದೀಗ ಹಳೆಯ ಪ್ರಕರಣದ ಕಾನೂನು ಪ್ರಕ್ರಿಯೆಗೆ ಸರಿಯಾಗಿ ಸ್ಪಂದಿಸದ ಕಾರಣ ಮತ್ತೆ ಜೈಲು ಪಾಲಾಗಿದ್ದಾರೆ.

You may also like

Leave a Comment