ವಾಹನ ಸವಾರರಿಗೆ ಗುಡ್‌ನ್ಯೂಸ್: ಟ್ರಾಫಿಕ್ ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ರಿಯಾಯಿತಿ
ಬೆಂಗಳೂರು, ಜೂನ್ 5: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಸಿಹಿಸುದ್ದಿ ನೀಡಿದೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ವಿಧಿಸಲಾದ ಬಾಕಿ ದಂಡ ಪಾವತಿಸಲು ಶೇ.50 ರಷ್ಟು ರಿಯಾಯಿತಿ ಘೋಷಿಸಲಾಗಿದ್ದು, ಜೂನ್ 21ರಿಂದ ಜುಲೈ 10ರವರೆಗೆ 20 ದಿನಗಳ ವಿಶೇಷ ಅವಕಾಶ ಕಲ್ಪಿಸಲಾಗಿದೆ.
ಪೊಲೀಸ್ ಇಲಾಖೆಯ 2026ರ ಮೇ ತಿಂಗಳಿಗಿಂತ ಮೊದಲು ದಾಖಲಾದ ಸಂಚಾರಿ ಇ-ಚಲನ್ ಪ್ರಕರಣಗಳು ಹಾಗೂ ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರವರೆಗೆ ಬಾಕಿ ಉಳಿದಿರುವ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ. ಇದರಿಂದ ವಾಹನ ಸವಾರರು ತಮ್ಮ ಬಾಕಿ ದಂಡದ ಮೊತ್ತದ ಅರ್ಧದಷ್ಟು ಹಣ ಪಾವತಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ವಿವಿಧ ಡಿಜಿಟಲ್ ವೇದಿಕೆಗಳ ಮೂಲಕ ದಂಡ ಪಾವತಿಸುವ ವ್ಯವಸ್ಥೆ ಕಲ್ಪಿಸಿದೆ. ಅಸ್ತ್ರಂ ಆ್ಯಪ್, ಕೆಎಸ್‌ಪಿಎಸ್ ಆ್ಯಪ್, ಕರ್ನಾಟಕ ಒನ್ ಕೇಂದ್ರಗಳು ಹಾಗೂ ಬೆಂಗಳೂರು ಒನ್ ವೆಬ್‌ಸೈಟ್ ಮೂಲಕ ಬಾಕಿ ದಂಡದ ವಿವರ ಪರಿಶೀಲಿಸಿ ರಿಯಾಯಿತಿ ದರದಲ್ಲಿ ಪಾವತಿಸಬಹುದು.
ಈ ಹಿಂದೆ ಕೂಡ ಸರ್ಕಾರ ಶೇ.50 ರಷ್ಟು ರಿಯಾಯಿತಿ ನೀಡಿದ್ದ ವೇಳೆ ಭಾರಿ ಪ್ರಮಾಣದಲ್ಲಿ ದಂಡ ಸಂಗ್ರಹವಾಗಿತ್ತು. ಇದೀಗ ಮತ್ತೊಮ್ಮೆ ನೀಡಿರುವ ಈ ಅವಕಾಶವನ್ನು ವಾಹನ ಸವಾರರು ಸದುಪಯೋಗಪಡಿಸಿಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ.