Home ಮಾರುಕಟ್ಟೆಕೋಳಿ ಮಾಂಸ ಪ್ರಿಯರಿಗೆ ದರ ಏರಿಕೆ ಶಾಕ್!

ಕೋಳಿ ಮಾಂಸ ಪ್ರಿಯರಿಗೆ ದರ ಏರಿಕೆ ಶಾಕ್!

by Editor

ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಕೋಳಿ ಮಾಂಸದ ಬೆಲೆ ಗಗನಕ್ಕೇರುತ್ತಿದ್ದು, ಮಾಂಸಪ್ರಿಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಉತ್ಪಾದನೆಯಲ್ಲಿ ಉಂಟಾಗಿರುವ ಗಣನೀಯ ಕುಸಿತ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಬೆಲೆಗಳು ಏಕಾಏಕಿ ಏರಿಕೆಯಾಗಿವೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಪ್ರತಿ ಕೆಜಿಗೆ ₹200 ರಿಂದ ₹240ರ ಆಸುಪಾಸಿನಲ್ಲಿದ್ದ ಮಾಂಸದ ದರ, ಈಗ ಬರೋಬ್ಬರಿ ₹350ರ ಗಡಿ ತಲುಪಿದೆ. ಇದು ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ, ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೂ ತಲೆನೋವಾಗಿ ಪರಿಣಮಿಸಿದ್ದು, ಆಹಾರದ ಪದಾರ್ಥಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಈ ಬೆಲೆ ಏರಿಕೆಗೆ ಕೇವಲ ಉತ್ಪಾದನೆ ಕುಸಿತ ಮಾತ್ರವಲ್ಲದೆ, ನೆರೆರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕೋಳಿ ಸಾಕಾಣಿಕೆದಾರರು ನಡೆಸುತ್ತಿರುವ ಪ್ರತಿಭಟನೆಯೂ ಪ್ರಮುಖ ಕಾರಣವಾಗಿದೆ. ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಮಾರುಕಟ್ಟೆಗೆ ಬರುತ್ತಿರುವ ಕೋಳಿಗಳ ಸಂಖ್ಯೆ ಕ್ಷೀಣಿಸಿದೆ. ಇದರ ನೇರ ಪರಿಣಾಮವಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಬಾಯ್ಲರ್ ಕೋಳಿ ದರ ₹290 ದಾಟಿದ್ದರೆ, ಸ್ಕಿನ್‌ಲೆಸ್ ಚಿಕನ್ ದರ ₹340 ತಲುಪಿ ಜನಸಾಮಾನ್ಯರು ಮಾಂಸದ ಅಂಗಡಿಯತ್ತ ಸುಳಿಯಲು ಯೋಚಿಸುವಂತಾಗಿದೆ.

ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್‌ ಅಸೋಸಿಯೇಶನ್ ನೀಡಿರುವ ದರದ ಪಟ್ಟಿಯಂತೆ, ಹೋಲ್‌ಸೇಲ್ ದರವೇ ಏರಿಕೆಯಾಗಿರುವುದು ಚಿಲ್ಲರೆ ವ್ಯಾಪಾರಿಗಳ ಮೇಲೆ ಒತ್ತಡ ಹೇರಿದೆ. ಪ್ರಸ್ತುತ ಬಾಯ್ಲರ್ ರಿಟೇಲ್ ದರ ₹290 ಇದ್ದರೆ, ವಿತ್ ಸ್ಕಿನ್ ₹315 ಹಾಗೂ ವಿತೌಟ್ ಸ್ಕಿನ್ ₹340ಕ್ಕೆ ಮಾರಾಟವಾಗುತ್ತಿದೆ. ಗಿರಿರಾಜ ಮತ್ತು ಫಾರಂ ಕೋಳಿಗಳ ಬೆಲೆಯೂ ಏರುಗತಿಯಲ್ಲೇ ಸಾಗಿದ್ದು, ಪೂರೈಕೆ ಸಹಜ ಸ್ಥಿತಿಗೆ ಬರುವವರೆಗೆ ಈ ಬೆಲೆ ಏರಿಕೆಯ ಬಿಸಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ.

You may also like

Leave a Comment