ಮಡಿಕೇರಿ: ಹುಟ್ಟಿ ಅಳಬೇಕಿದ್ದ ಕಂದಮ್ಮ ಜನಿಸುವ ಮೊದಲೇ ಇಹಲೋಕ ತ್ಯಜಿಸಿದ ಮನಕಲಕುವ ಘಟನೆ ಮಡಿಕೇರಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿರುವ ಪೋಷಕರು, ಆಸ್ಪತ್ರೆಯ ಆವರಣದಲ್ಲಿ ಕಣ್ಣೀರಿಡುತ್ತಾ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಬಾಳೆಲೆ ಮೂಲದ ಗರ್ಭಿಣಿ ಸರೋಜಾ ಅವರು ಆಸೆ-ಆಕಾಂಕ್ಷೆಗಳಿಂದ ಹೊತ್ತಿದ್ದ ಹೆಣ್ಣು ಮಗುವಿನ ಕನಸು ಈಗ ಸ್ಮಶಾನದ ಹಾದಿ ಹಿಡಿದಿದ್ದು, ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಘಟನೆಯ ಹಿನ್ನೆಲೆಯಂತೆ, ಜನವರಿ 20ರಂದು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡಿದ್ದ ಸರೋಜಾ ಅವರಿಗೆ ಮಗು ಅಪಾಯದಲ್ಲಿದೆ ಎಂದು ತಿಳಿದುಬಂದಿತ್ತು. ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ತೆರಳುವಂತೆ ಡಾ. ಗ್ರೀಷ್ಮಾ ಅವರು ಸೂಚಿಸಿದ್ದರು. ಅದರಂತೆ ಅಂದೇ ಸಂಜೆ 7 ಗಂಟೆಗೆ ಸರೋಜಾ ಆಸ್ಪತ್ರೆಗೆ ದಾಖಲಾಗಿದ್ದರೂ, ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ವೈದ್ಯರು ಅರಿಯಲಿಲ್ಲ ಎಂಬ ಆರೋಪ ಕೇಳಿಬಂದಿದೆ. ರಾತ್ರಿ ಪಾಳಿಯಲ್ಲಿದ್ದ ಡಾ. ಮಮತಾ ಅವರು ಗರ್ಭಿಣಿಯನ್ನು ಪರೀಕ್ಷಿಸದೆ ನಿರ್ಲಕ್ಷ್ಯ ತೋರಿದ್ದಾರೆ ಮತ್ತು ವೈದ್ಯಕೀಯ ವಿದ್ಯಾರ್ಥಿನಿಯರ ಮೂಲಕ ಪರೀಕ್ಷೆ ನಡೆಸಿ ಕಾಲಹರಣ ಮಾಡಿದ್ದಾರೆ ಎಂಬುದು ಪೋಷಕರ ಗಂಭೀರ ದೂರಾಗಿದೆ.
ಮರುದಿನ ಬೆಳಿಗ್ಗೆ ಡಾ. ಮಮತಾ ಅವರು ಬಂದು ಪರೀಕ್ಷಿಸಿದಾಗ ಮಗು ಹೊಟ್ಟೆಯಲ್ಲೇ ಮೃತಪಟ್ಟಿರುವುದು ದೃಢಪಟ್ಟಿದೆ. ಬಳಿಕ ಹೆರಿಗೆ ಮಾಡಿಸಿ ಮೃತ ಹೆಣ್ಣು ಮಗುವನ್ನು ಹೊರತೆಗೆಯಲಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯ ವೈದ್ಯರಾದ ಡಾ. ಸೋಮಶೇಖರ್ ಹಾಗೂ ಡಾ. ನಂಜುಂಡ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆಯ ಭರವಸೆ ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಷಕರು, ಶಾಸಕ ಡಾ. ಮಂಥರ್ ಗೌಡ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ದೂರು ನೀಡಿ ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪಟ್ಟು ಹಿಡಿದಿದ್ದಾರೆ.