ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಬಿಗ್ ಶಾಕ್: ಆಧಾರ್ ಬಯೋಮೆಟ್ರಿಕ್ ದೃಢೀಕರಣ ಇನ್ನು ಕಡ್ಡಾಯ!
ನವದೆಹಲಿ: ದೇಶದ ಎಲ್ಲಾ ಮನೆಬಳಕೆಯ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಮಹತ್ವದ ಸೂಚನೆಯೊಂದನ್ನು ನೀಡಿದೆ.
ಇನ್ಮುಂದೆ ಪ್ರತಿಯೊಬ್ಬ ಗ್ರಾಹಕರೂ ಆಧಾರ್ ಬಯೋಮೆಟ್ರಿಕ್ ದೃಢೀಕರಣ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಅನಿಲ ಪೂರೈಕೆಯಲ್ಲಿ ಉಂಟಾಗಬಹುದಾದ ವ್ಯತ್ಯಯಗಳನ್ನು ಸರಿದೂಗಿಸಲು ಮತ್ತು ಸಬ್ಸಿಡಿ ದುರುಪಯೋಗವನ್ನು ತಡೆಗಟ್ಟಲು ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಮನೆಯಲ್ಲೇ ಕುಳಿತು ಮಾಡಬಹುದು ಇ-ವೆರಿಫಿಕೇಶನ್!
ಗ್ರಾಹಕರು ಗ್ಯಾಸ್ ಏಜೆನ್ಸಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ತಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಆಧಾರ್ ಫೇಸ್ ಆರ್‌ಡಿ ಆಪ್ ಮತ್ತು ಆಯಾ ತೈಲ ಕಂಪನಿಗಳ ಅಧಿಕೃತ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿ ಮುಖ ಚಹರೆಯ ಗುರುತಿನ ಮೂಲಕ ದೃಢೀಕರಣ ಮಾಡಬಹುದು.
ಇದು ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳ ಎಲ್ಲಾ ಗ್ರಾಹಕರಿಗೆ ಅನ್ವಯವಾಗಲಿದೆ.
ಉಜ್ವಲ ಯೋಜನೆಯ ಫಲಾನುಭವಿಗಳಿಗೆ ನಿಯಮ ಕಠಿಣ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಸಂಪರ್ಕ ಪಡೆದ ಗ್ರಾಹಕರಿಗೆ ಈ ನಿಯಮ ಮತ್ತಷ್ಟು ಕಡ್ಡಾಯವಾಗಿದೆ. ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ, ಅಂದರೆ ಮೊದಲ ಮರುಪೂರಣ ಪಡೆಯುವ ಮುನ್ನವೇ ಬಯೋಮೆಟ್ರಿಕ್ ಪ್ರಕ್ರಿಯೆ ಮುಗಿಸಿರಬೇಕು.
ಇಲ್ಲದಿದ್ದರೆ ಯೋಜನೆಯ ಸೌಲಭ್ಯಗಳು ಸ್ಥಗಿತಗೊಳ್ಳಲಿವೆ.ಒಂದು ವೇಳೆ ಗ್ರಾಹಕರು ಇ-ವೆರಿಫಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲವಾದರೆ
ಗ್ಯಾಸ್ ಸಿಲಿಂಡರ್ ಬುಕಿಂಗ್ ಮತ್ತು ಪೂರೈಕೆಯಲ್ಲಿ ಅಡಚಣೆ ಉಂಟಾಗಬಹುದು.ಸರ್ಕಾರದಿಂದ ಬರುವ ಗ್ಯಾಸ್ ಸಬ್ಸಿಡಿ ಹಣ ತಕ್ಷಣವೇ ಸ್ಥಗಿತಗೊಳ್ಳಲಿದೆ.ಪರಿಶೀಲನೆ ಪೂರ್ಣಗೊಳ್ಳುವವರೆಗೆ ಯಾವುದೇ ರಿಯಾಯಿತಿಗಳು ಲಭ್ಯವಿರುವುದಿಲ್ಲ.
ಸಬ್ಸಿಡಿಯು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡಲು ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಈ ವ್ಯವಸ್ಥೆಯನ್ನು ಸರಳಗೊಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನಿಮ್ಮ ಗ್ಯಾಸ್ ಸಬ್ಸಿಡಿ ಮುಂದುವರಿಯಬೇಕಾದರೆ ತಕ್ಷಣವೇ ಮೊಬೈಲ್ ಮೂಲಕ ಅಥವಾ ನಿಮ್ಮ ವಿತರಕರನ್ನು ಸಂಪರ್ಕಿಸಿ ಆಧಾರ್ ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಿ.