ಕಡಬ: ರಾಮಕುಂಜದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದ ಹದಿಹರೆಯದ ಬಾಲಕನ ಸಾವು ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಮೊದಲು ಆತ್ಮಹತ್ಯೆ ಎಂದು ಭಾವಿಸಲಾಗಿದ್ದ ಈ ಪ್ರಕರಣದಲ್ಲಿ, ಸ್ವಂತ ತಂದೆಯೇ ಮಗನ ಎದೆಗೆ ಗುಂಡಿಕ್ಕಿ ಕೊಲೆ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 17 ವರ್ಷದ ಮೋಕ್ಷ ಎಂಬ ಬಾಲಕ ತನ್ನ ತಂದೆ ವಸಂತ ಪೂಜಾರಿಯ ಕ್ರೌರ್ಯಕ್ಕೆ ಬಲಿಯಾದ ದುರ್ದೈವಿ.
ಕಳೆದ ಒಂದು ವರ್ಷದಿಂದ ವಸಂತ ಪೂಜಾರಿ ಮತ್ತು ಮೋಕ್ಷ ಮಾತ್ರ ಮನೆಯಲ್ಲಿ ವಾಸಿಸುತ್ತಿದ್ದರು. ಪತ್ನಿ ಜಯಶ್ರೀ ಅವರು ಪತಿಯೊಂದಿಗೆ ಉಂಟಾದ ವೈಮನಸ್ಸಿನಿಂದಾಗಿ ಮಂಗಳೂರಿನ ತಾಯಿ ಮನೆಯಲ್ಲಿ ವಾಸವಿದ್ದರು. ಶನಿವಾರ ಸಂಜೆ ತಂದೆ-ಮಗನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ವಸಂತ ಪೂಜಾರಿ ತನ್ನಲ್ಲಿದ್ದ ಕೋವಿಯಿಂದ ಮಗನಿಗೆ ಗುಂಡು ಹಾರಿಸಿದ್ದಾನೆ. ಮಗ ರಕ್ತದ ಮಡುವಿನಲ್ಲಿ ಬಿದ್ದ ಬೆನ್ನಲ್ಲೇ, ಆರೋಪಿ ತಂದೆ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಪ್ರಸ್ತುತ ಆರೋಪಿ ವಸಂತ ಪೂಜಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪತ್ನಿ ಜಯಶ್ರೀ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಲಹವು ಒಂದು ತುಂಬು ಜೀವವನ್ನು ಬಲಿಪಡೆದಿರುವುದು ಗ್ರಾಮಸ್ಥರಲ್ಲಿ ಆಘಾತ ಮೂಡಿಸಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.