Home ಕ್ರೈಂಪ್ರೇಯಸಿಯ ಶಿರಚ್ಛೇದ ಮಾಡಿದ ಪ್ರೇಮಿ; ಸಿಸಿಟಿವಿ ದೃಶ್ಯದಿಂದ ಬಯಲಾಯ್ತು ರೋಚಕ ಕಹಾನಿ!

ಪ್ರೇಯಸಿಯ ಶಿರಚ್ಛೇದ ಮಾಡಿದ ಪ್ರೇಮಿ; ಸಿಸಿಟಿವಿ ದೃಶ್ಯದಿಂದ ಬಯಲಾಯ್ತು ರೋಚಕ ಕಹಾನಿ!

by Editor

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದ ಯುವತಿಯ ಶಿರರಹಿತ ಶವ ಪತ್ತೆ ಪ್ರಕರಣವನ್ನು ಪೊಲೀಸರು ಕೇವಲ 12 ಗಂಟೆಗಳಲ್ಲಿ ಭೇದಿಸಿದ್ದಾರೆ. ಪಾರ್ವತಿ ವಿಹಾರ್‌ನಲ್ಲಿ ಜನವರಿ 24ರಂದು ಚೀಲದಲ್ಲಿ ತುಂಬಿದ್ದ ಸ್ಥಿತಿಯಲ್ಲಿ 25 ವರ್ಷದ ಮಿಂಕಿ ಶರ್ಮಾ ಎಂಬಾಕೆಯ ಮಂಡಿಯ ಕೆಳಭಾಗ ಮತ್ತು ತಲೆಯಿಲ್ಲದ ದೇಹ ಪತ್ತೆಯಾಗಿತ್ತು. ಈ ಬರ್ಬರ ಕೃತ್ಯ ಎಸಗಿದ ಆರೋಪದ ಮೇಲೆ ಆಕೆಯ ಸಹೋದ್ಯೋಗಿ ಹಾಗೂ ಪ್ರೇಮಿ ವಿನಯ್ ರಜಪೂತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹೋಟೆಲ್ ಮ್ಯಾನೇಜ್‌ಮೆಂಟ್ ಮುಗಿಸಿ ಖಾಸಗಿ ಕಂಪನಿಯೊಂದರಲ್ಲಿ ಎಚ್‌ಆರ್ ಮ್ಯಾನೇಜರ್ ಆಗಿದ್ದ ಮಿಂಕಿ, ಮದುವೆ ಕಾರ್ಡ್ ಕೊರಿಯರ್ ಮಾಡಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಬಂದಿದ್ದರು.

ಆರೋಪಿ ವಿನಯ್ ಮತ್ತು ಮಿಂಕಿ ದೀರ್ಘಕಾಲದಿಂದ ಪ್ರೀತಿಸುತ್ತಿದ್ದರು. ಆದರೆ ಮಿಂಕಿ ಬೇರೊಬ್ಬ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ವಿನಯ್‌ನನ್ನು ಕಾಡುತ್ತಿತ್ತು. ಇದೇ ವಿಚಾರವಾಗಿ ವಿನಯ್ ಆಕೆಯನ್ನು ಕಚೇರಿಗೆ ಕರೆಸಿಕೊಂಡು ಗಲಾಟೆ ಮಾಡಿದ್ದಾನೆ. ವಾಗ್ವಾದ ತಾರಕಕ್ಕೇರಿದಾಗ ಆಕೆಗೆ ಎಂಟಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕಚೇರಿಯಲ್ಲೇ ಶವವನ್ನು ತುಂಡು ಮಾಡಿ, ತಲೆಯನ್ನು ಬೇರ್ಪಡಿಸಿ ಚರಂಡಿಗೆ ಎಸೆದಿದ್ದಾನೆ. ತದನಂತರ ದೇಹದ ಉಳಿದ ಭಾಗವನ್ನು ಚೀಲದಲ್ಲಿ ತುಂಬಿ ಸೇತುವೆಯ ಮೇಲಿಂದ ಎಸೆದು ಪರಾರಿಯಾಗಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಮಿಂಕಿ ನಾಪತ್ತೆಯಾದ ಬಗ್ಗೆ ಕುಟುಂಬಸ್ಥರು ದೂರು ನೀಡಿದಾಗ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಮಿಂಕಿಯ ಸ್ಕೂಟರ್ ಅನ್ನು ವಿನಯ್ ಚಲಾಯಿಸುತ್ತಿರುವುದು ಪತ್ತೆಯಾಗಿದ್ದು, ಪ್ರಕರಣಕ್ಕೆ ಪ್ರಮುಖ ತಿರುವು ನೀಡಿತು. ಘಟನೆಯ ನಂತರವೂ ಏನೂ ಅರಿಯದವನಂತೆ ಆರೋಪಿಯು ಮಿಂಕಿಯ ಕುಟುಂಬಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಾಟಕವಾಡುತ್ತಿದ್ದನು. ಫೆಬ್ರವರಿ 6 ರಂದು ಮಿಂಕಿಯ ಅಣ್ಣನ ಮದುವೆ ನಿಗದಿಯಾಗಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಆದರೆ ಈ ಘಟನೆಯಿಂದ ಇಡೀ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಪೊಲೀಸರು ಸದ್ಯ ತಲೆಗಾಗಿ ಶೋಧ ಮುಂದುವರಿಸಿದ್ದಾರೆ.

You may also like

Leave a Comment