Home ರಾಜಕೀಯತುಳು ಭಾಷೆಗೆ ಸಿಗಲಿದೆಯೇ ರಾಜ್ಯದ 2ನೇ ಅಧಿಕೃತ ಭಾಷೆಯ ಮಾನ್ಯತೆ? ಶೀಘ್ರವೇ ಸಿಎಂ ಸಭೆ!

ತುಳು ಭಾಷೆಗೆ ಸಿಗಲಿದೆಯೇ ರಾಜ್ಯದ 2ನೇ ಅಧಿಕೃತ ಭಾಷೆಯ ಮಾನ್ಯತೆ? ಶೀಘ್ರವೇ ಸಿಎಂ ಸಭೆ!

by Editor

ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತು ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಬುಧವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಅಶೋಕ್‌ಕುಮಾರ್ ರೈ ಅವರ ಪ್ರಶ್ನೆಗೆ ಉತ್ತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಕರಾವಳಿ ಭಾಗದ ಶಾಸಕರ ಮಹತ್ವದ ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ತುಳು ಭಾಷೆಯ ಇತಿಹಾಸ, ಲಿಪಿ ಮತ್ತು ಸಾಹಿತ್ಯ ಪರಂಪರೆಯ ಕುರಿತು ಅಧ್ಯಯನ ನಡೆಸಿದ್ದ ಡಾ. ಮೋಹನ್ ಆಳ್ವ ಸಮಿತಿಯು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯನ್ನು ಆಧರಿಸಿ ಕಾನೂನು ಇಲಾಖೆಯು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಅಧಿಕೃತ ಭಾಷೆಗಳನ್ನು ಘೋಷಿಸಲು ಅವಕಾಶವಿದೆ ಎಂಬ ಅಭಿಪ್ರಾಯ ನೀಡಿದೆ. ಇದೇ ಮಾದರಿಯಲ್ಲಿ ಆಂಧ್ರಪ್ರದೇಶ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಲು ಇಲಾಖೆಯ ನಿರ್ದೇಶಕರ ನೇತೃತ್ವದ ನಿಯೋಗವನ್ನು ಕಳುಹಿಸಲಾಗಿದ್ದು, ನಿಯೋಗದ ವರದಿ ಬಂದ ಕೂಡಲೇ ಅಂತಿಮ ಚರ್ಚೆ ನಡೆಯಲಿದೆ ಎಂದು ಸಚಿವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಉದಾಹರಣೆ ನೀಡಿ ತುಳು ಭಾಷೆಗೆ ಮಾನ್ಯತೆ ನೀಡುವಂತೆ ಒತ್ತಾಯಿಸಿದರು. ಚರ್ಚೆಯ ವೇಳೆ ಶಾಸಕರು ತುಳು ಭಾಷೆಯಲ್ಲೇ ಮಾತನಾಡಿದಾಗ, ಸಚಿವ ತಂಗಡಗಿ ಅವರು ತಮಾಷೆಯಾಗಿ ನೆರವು ಕೋರಿದರು. ಇದಕ್ಕೆ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, “ತುಳುನಾಡಿನವರು ಟೀಕೆಯನ್ನಾಗಲಿ ಅಥವಾ ಹೊಗಳಿಕೆಯನ್ನಾಗಲಿ ಪ್ರೀತಿಯಿಂದಲೇ ಮಾಡುತ್ತಾರೆ” ಎಂದು ಹೇಳುವ ಮೂಲಕ ಸದನದಲ್ಲಿ ಲವಲವಿಕೆ ಮೂಡಿಸಿದರು.

You may also like

Leave a Comment