Home ಬ್ರೇಕಿಂಗ್ ನ್ಯೂಸ್​ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಪ್ರಚಾರಕ್ಕೆ ಬ್ರೇಕ್

​ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ತಂಬಾಕು ಪ್ರಚಾರಕ್ಕೆ ಬ್ರೇಕ್

by Editor

ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ತೀವ್ರ ಆಕ್ರೋಶಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಕೆಎಸ್‌ಆರ್‌ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್‌ಗಳ ಮೇಲೆ ಇಂತಹ ಹಾನಿಕಾರಕ ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಹಣದಾಸೆಗಾಗಿ ಯುವಜನತೆ ಮತ್ತು ಶಾಲಾ ಮಕ್ಕಳ ಮೇಲೆ ಕೆಟ್ಟ ಪ್ರಭಾವ ಬೀರುವ ಜಾಹೀರಾತುಗಳನ್ನು ಹಾಕಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿಗೆ ಸಚಿವರು ಈ ಮೂಲಕ ಸ್ಪಂದಿಸಿದ್ದಾರೆ.

ಸಾರಿಗೆ ಸಚಿವರು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕೃತ ಸೂಚನಾ ಪತ್ರ ರವಾನಿಸಿದ್ದು, ಈ ಕೂಡಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ. ಬಸ್ಸುಗಳಲ್ಲಿ ಮಾತ್ರವಲ್ಲದೆ, ಬಸ್ ನಿಲ್ದಾಣಗಳಲ್ಲಿಯೂ ತಂಬಾಕು ಉತ್ಪನ್ನಗಳ ಸೇವನೆಗೆ ಉತ್ತೇಜಿಸುವ ನೇರ ಅಥವಾ ಪರೋಕ್ಷವಾದ ಯಾವುದೇ ಜಾಹೀರಾತುಗಳನ್ನು ಪ್ರಚಾರ ಮಾಡುವಂತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರ ಆರೋಗ್ಯ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇವಲ ಹೊಸ ಜಾಹೀರಾತುಗಳ ನಿಷೇಧ ಮಾತ್ರವಲ್ಲದೆ, ಈಗಾಗಲೇ ಬಸ್‌ಗಳ ಮೇಲೆ ಅಳವಡಿಸಲಾಗಿರುವ ಗುಟ್ಕಾ ಬ್ರಾಂಡ್‌ಗಳ ಚಿತ್ರಗಳನ್ನು ತಕ್ಷಣವೇ ತೆಗೆದುಹಾಕಲು ಸಚಿವರು ಗಡುವು ನಿಗದಿಪಡಿಸಿದ್ದಾರೆ. ನಿಗದಿತ ಸಮಯದೊಳಗೆ ಎಲ್ಲಾ ಪ್ರಚಾರದ ಫಲಕಗಳನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ಈ ಕ್ರಮಕ್ಕೆ ನಾಗರಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಸಾರಿಗೆ ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ಹಿಡಿದಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

You may also like

Leave a Comment