ಕೋಲಾರ ಜಿಲ್ಲೆಯ ಕೆಂದಟ್ಟಿಯಲ್ಲಿ ನಡೆದ ಯಲ್ಲೇಶ್ ಎಂಬುವವರ ಕೊಲೆ ಪ್ರಕರಣ ಈಗ ಸಿನಿಮಾ ಮಾದರಿಯ ತಿರುವು ಪಡೆದುಕೊಂಡಿದೆ. ತಾಯಿಯ ಪ್ರಿಯಕರನನ್ನು ಮಗನೇ ಹತ್ಯೆಗೈದ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನೆಲೆ:
ನರಸಾಪುರ ಗ್ರಾಮದ ರೇಣುಕಾ ಎಂಬಾಕೆ ತನ್ನ ಪತಿ ಸಂತೋಷ್ ಮತ್ತು ಮಕ್ಕಳನ್ನು ತೊರೆದು, ಯಲ್ಲೇಶ್ ಎಂಬುವವನ ಜೊತೆ ಸಂಸಾರ ಹೂಡಿದ್ದಳು. ಈ ಸಂಬಂಧ ಕುಟುಂಬದಲ್ಲಿ ತೀವ್ರ ಕಂದಕ ಸೃಷ್ಟಿಸಿತ್ತು. ಆರಂಭದಲ್ಲಿ ಈ ಕೊಲೆಯನ್ನು ರೇಣುಕಾ ಪತಿ ಸಂತೋಷ್ ಮಾಡಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಈಗ ರೇಣುಕಾ ಪುತ್ರ ಬಿಂದು ಕುಮಾರ್ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಲೈವ್ ವಿಡಿಯೋದಲ್ಲಿ ತಪ್ಪೊಪ್ಪಿಗೆ:
ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ಬಿಂದು ಕುಮಾರ್, “ನಮ್ಮ ತಾಯಿಯನ್ನು ತಪ್ಪು ದಾರಿಗೆ ಎಳೆದು ನಮ್ಮಿಂದ ದೂರ ಮಾಡಿದ್ದಲ್ಲದೆ, ನನ್ನ ತಂಗಿಯ ಬಗ್ಗೆಯೂ ಯಲ್ಲೇಶ್ ಅಸಭ್ಯವಾಗಿ ಮಾತನಾಡಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನನ್ನ ಮೇಲೂ ಆತ ದಾಳಿ ನಡೆಸಿದ್ದರಿಂದ, ಅನಿವಾರ್ಯವಾಗಿ ನಾನೇ ಅವನನ್ನು ಮುಗಿಸಿದ್ದೇನೆ” ಎಂದು ಆಕ್ರೋಶ ಹೊರಹಾಕಿದ್ದಾನೆ.
ತಂದೆ ನಿರಪರಾಧಿ ಎಂದು ಹೇಳಿರುವ ಬಿಂದು ಕುಮಾರ್, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಶರಣಾಗುವುದಾಗಿ ತಿಳಿಸಿದ್ದಾನೆ. ಸದ್ಯ ಈ ಪ್ರಕರಣ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.