ಇತಿಹಾಸ ಪ್ರಸಿದ್ಧ ಲಕ್ಕುಂಡಿಯಲ್ಲಿ ಉತ್ಖನನ ಪೂರ್ಣ: ಹಲವು ಪ್ರಾಚ್ಯಾವಶೇಷ ಬೆಳಕಿಗೆ
ಲಕ್ಕುಂಡಿ ,ಮಾ.12: ಇತಿಹಾಸ ಪ್ರಸಿದ್ಧ ಲಕ್ಕುಂಡಿಯ ಭೂಗರ್ಭದಲ್ಲಿ ಅಡಗಿರುವ ಪ್ರಾಚೀನ ಅವಶೇಷಗಳನ್ನು ಪತ್ತೆಪ್ರಾಚೀನ ಅವಶೇಷಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಕಳೆದ 47 ದಿನಗಳಿಂದ ನಡೆಯುತ್ತಿದ್ದ ಉತ್ಖನನ ಕಾರ್ಯ ಬುಧವಾರ ಅಧಿಕೃತವಾಗಿ ಮುಕ್ತಾಯಗೊಂಡಿದೆ.
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರಿನ ಆವರಣದಲ್ಲಿ ಈ ಉತ್ಖನನ ಕಾರ್ಯ ನಡೆದಿದ್ದು, ಕಳೆದ ಜನವರಿ 10ರಂದು ಗಂಗವ್ವ ರಿತ್ತಿ ಅವರ ಜಾಗದಲ್ಲಿ ನಿಧಿ ಪತ್ತೆಯಾದ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಹಾಗೂ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಉತ್ಖನನ ಆರಂಭಿಸಲಾಗಿತ್ತು.
ಉತ್ಖನನ ಕಾರ್ಯಕ್ಕಾಗಿ 10×10 ಅಡಿ ಅಳತೆಯ ನಾಲ್ಕು ಬಾಕ್ಸ್‌ಗಳನ್ನು ರಚಿಸಿ ಸುಮಾರು 30ರಿಂದ 35 ಕಾರ್ಮಿಕರು 47 ದಿನಗಳ ಕಾಲ ಶ್ರಮಿಸಿದ್ದರು. ಈ ಅವಧಿಯಲ್ಲಿ 50ಕ್ಕೂ ಹೆಚ್ಚು ಪ್ರಾಚ್ಯಾವಶೇಷಗಳು ಪತ್ತೆಯಾಗಿದ್ದು ರಾಜ್ಯದ ಗಮನ ಸೆಳೆದಿವೆ. ಸುಮಾರು 14 ಅಡಿ ಆಳವರೆಗೆ ಉತ್ಖನನ ನಡೆಸಲಾಗಿದೆ. ಬುಧವಾರ ಸಂಜೆ ಉತ್ಖನನ ಸ್ಥಳಕ್ಕೆ ಪ್ಲಾಸ್ಟಿಕ್ ತಾಡಪತ್ರಿ ಹಾಕಿ ನಂತರ ತೆಗೆದ ಮಣ್ಣನ್ನು ಮತ್ತೆ ತುಂಬಿಸಿ ಸ್ಥಳವನ್ನು ಮುಚ್ಚಲಾಗಿದೆ.
ಕಳೆದ ಮಂಗಳವಾರ ಉತ್ಖನನ ಸ್ಥಳಕ್ಕೆ ಇತಿಹಾಸ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ದೊರೆತಿರುವ ಅವಶೇಷಗಳ ಮಹತ್ವ ಮತ್ತು ಅವುಗಳ ಕಾಲಮಾನ ಕುರಿತು ಅಧ್ಯಯನ ನಡೆಸಿದ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಈ ಪ್ರದೇಶದಲ್ಲಿ ಕೋಟೆಗೋಡೆಯ ತಳಪಾಯ ಇರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.
ಮಾ.30ರಂದು ನಡೆಯಲಿರುವ ವೀರಭದ್ರೇಶ್ವರ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಉತ್ಖನನ ನಡೆದ ಸ್ಥಳವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅನುಮತಿ ಪಡೆದು ಗ್ರಾಮದ ಇತರೆ ಸ್ಥಳಗಳಲ್ಲಿ ಉತ್ಖನನ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಇತಿಹಾಸ ತಜ್ಞರ ಪರಿಶೀಲನೆಯ ಬಳಿಕ ಉತ್ಖನನ ಕಾರ್ಯಕ್ಕೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಲಕ್ಕುಂಡಿ ಗ್ರಾಮದ ಇನ್ನೂ 6ರಿಂದ 8 ಸ್ಥಳಗಳಲ್ಲಿ ಉತ್ಖನನ ನಡೆಸುವ ಯೋಜನೆ ಇದೆ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.
ಇನ್ನೊಂದೆಡೆ, ಉತ್ಖನನದಲ್ಲಿ ಪತ್ತೆಯಾದ ಪ್ರಾಚ್ಯಾವಶೇಷಗಳು ಲಕ್ಕುಂಡಿಯ ಇತಿಹಾಸ ಮಹತ್ವವನ್ನು ಮತ್ತಷ್ಟು ಉಜ್ವಲಗೊಳಿಸಿವೆ. ಲಕ್ಕುಂಡಿಯನ್ನು ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿಸುವ ಸಲುವಾಗಿ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ತಿಳಿಸಿದ್ದಾರೆ. ಜೊತೆಗೆ ಗ್ರಾಮದಲ್ಲಿರುವ 101 ದೇವಾಲಯಗಳು ಮತ್ತು ಬಾವಿಗಳನ್ನು ಗುರುತಿಸುವ ಕಾರ್ಯವೂ ನಿರಂತರವಾಗಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ…