ವಿಟ್ಲ: ಕಸಬಾ ಗ್ರಾಮದ ಮಾರ್ನೆಮಿಗುಡ್ಡೆ ಬಳಿ ಆಟೋ ಚಾಲಕರೊಬ್ಬರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಸಬಾ ಗ್ರಾಮದ ರವೀಶ್ ಕುಲಾಲ್ (40) ಮತ್ತು ಅಶೋಕ (42) ಎಂದು ಗುರುತಿಸಲಾಗಿದೆ.
ಶನಿವಾರ ರಾತ್ರಿ ಪಡ್ನೂರು ಗ್ರಾಮದ ನಿವಾಸಿ, ಆಟೋ ಚಾಲಕ ಇಸುಬು ಅವರು ಮಹಿಳೆಯೊಬ್ಬರನ್ನು ಮನೆಗೆ ಬಿಟ್ಟು ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ದುಷ್ಕರ್ಮಿಗಳು ಆಟೋ ತಡೆದು, ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಬಳಿಯಿದ್ದ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಇಸುಬು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.