ಬೆಂಗಳೂರು: ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ 14 ವರ್ಷದ ಬಾಲಕನೊಬ್ಬ ಬೆಂಗಳೂರು ಜಲಮಂಡಳಿಯ (BWSSB) ತೆರೆದ ಸಂಪ್‌ನಲ್ಲಿ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ತಾತಗುಣಿಯಲ್ಲಿ ನಡೆದಿದೆ. ಚಾಮರಾಜನಗರ ಮೂಲದ ರಜನಿಕಾಂತ್ ಎಂಬುವವರ ಪುತ್ರ ಪ್ರೀತಮ್ (14) ಮೃತಪಟ್ಟ ದುರ್ದೈವಿ.
ತಾತಗುಣಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ಬಾಲಕ ಮೂರು ದಿನಗಳ ಹಿಂದೆ ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದ. ಈ ಕುರಿತು ಪೋಷಕರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಭಾನುವಾರ ಹುಡುಕಾಟ ನಡೆಸುತ್ತಿದ್ದ ವೇಳೆ, ಜಲಮಂಡಳಿಯ ಪೈಪ್‌ಲೈನ್ ಕಾಮಗಾರಿಗಾಗಿ ನಿರ್ಮಿಸಲಾಗಿದ್ದ ತೆರೆದ ಚೇಂಬರ್‌ನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.
ಜಲಮಂಡಳಿ ವಿರುದ್ಧ ಆಕ್ರೋಶ: ಕಾಮಗಾರಿಗಾಗಿ ತೆಗೆದಿದ್ದ ಸಂಪ್ ಅನ್ನು ಸರಿಯಾಗಿ ಮುಚ್ಚದ ಕಾರಣ ಬಾಲಕ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜಲಮಂಡಳಿಯ ಈ ಭೀಕರ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ನೇರ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಗ್ಗಲೀಪುರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಮುಂದುವರಿಸಿದ್ದಾರೆ.