ಧಾರವಾಡ: ಸಾಮಾಜಿಕ ಜಾಲತಾಣಗಳಲ್ಲಿ ಪರಿಶಿಷ್ಟ ಸಮುದಾಯದ ಮುಖಂಡರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದ ವ್ಯಕ್ತಿಯನ್ನು ಉಪನಗರ (ಸಬರ್ಬನ್) ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ವಿದ್ಯಾಮಾನ್ಯ ನಗರದ ನಿವಾಸಿ, ಐಟಿ ಎಕ್ಸಿಕ್ಯುಟಿವ್ ಆನಂದ್ ಅಂಜನಪ್ಪ (41) ಬಂಧಿತ ಆರೋಪಿ.
ಈತ ಫೇಸ್‌ಬುಕ್‌ನಲ್ಲಿ ‘ಗುಲಾಮರ ಅಪ್ಪ’ ಎಂಬ ಹೆಸರಿನ ಖಾತೆ ತೆರೆದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಪ್ರಮುಖ ನಾಯಕರ ಬಗ್ಗೆ ಕೆಟ್ಟದಾಗಿ ಬರಹಗಳನ್ನು ಪ್ರಕಟಿಸುತ್ತಿದ್ದ. ಈ ಕುರಿತು ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ ನೀಡಿದ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು, ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯನ್ನು ಬೆಂಗಳೂರಿನಲ್ಲಿ ಸೆರೆಹಿಡಿದಿದ್ದಾರೆ. ಬಂಧಿತನು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.