ಬೆಳ್ತಂಗಡಿ: ಒಡಿಲ್ನಾಳದ ಸಂಬೋಳ್ಯ ನಿವಾಸಿ ಸುಮಂತ್ ಅವರ ನಿಗೂಢ ಸಾವಿನ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಮಹತ್ವದ ಪ್ರಕಟಣೆ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಫೊರೆನ್ಸಿಕ್ ಮತ್ತು ಅಂತಿಮ ಮರಣೋತ್ತರ ಪರೀಕ್ಷಾ ವರದಿಗಳು ಇನ್ನೂ ಲಭ್ಯವಾಗದ ಹಿನ್ನೆಲೆಯಲ್ಲಿ, ಈ ಸಾವನ್ನು ಹತ್ಯೆ ಎಂದು ಸದ್ಯಕ್ಕೆ ದೃಢಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಪ್ರಗತಿಯಲ್ಲಿರುವಾಗಲೇ ಸಾರ್ವಜನಿಕ ವಲಯದಲ್ಲಿ ಇದು ಕೊಲೆ ಎಂಬ ವದಂತಿಗಳು ಹರಡುತ್ತಿದ್ದು, ಇಂತಹ ದಾರಿ ತಪ್ಪಿಸುವ ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದೇ ವೇಳೆ, 2025ರ ಆಗಸ್ಟ್‌ನಲ್ಲಿ ನಡೆದ ಹಳೆಯ ಅಸಹಜ ಸಾವು ಪ್ರಕರಣವೊಂದನ್ನು ಈ ಕೇಸ್‌ಗೆ ಲಿಂಕ್ ಮಾಡುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈವರೆಗಿನ ತನಿಖೆಯಲ್ಲಿ ಆ ಹಳೆಯ ಪ್ರಕರಣಕ್ಕೂ ಸುಮಂತ್ ಸಾವಿಗೂ ಯಾವುದೇ ಸಂಬಂಧವಿರುವುದು ಅಥವಾ ಅದು ಹತ್ಯೆ ಎಂಬುವುದಕ್ಕೆ ಯಾವುದೇ ಪೂರಕ ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಎಸ್‌ಪಿ ಕಚೇರಿ ಸ್ಪಷ್ಟಪಡಿಸಿದೆ. ತನಿಖಾ ವರದಿಗಳು ಬಂದ ನಂತರವೇ ಸಾವಿನ ಹಿಂದಿನ ನೈಜ ಕಾರಣ ಬಹಿರಂಗವಾಗಲಿದ್ದು, ಅಲ್ಲಿಯವರೆಗೆ ಸಾರ್ವಜನಿಕರು ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಲಾಗಿದೆ.