ನವದೆಹಲಿ: ಭಾರತವು ಯಾವುದೇ ದೇಶದಿಂದ ಕಚ್ಚಾತೈಲ ಖರೀದಿಸಲು ಸಂಪೂರ್ಣ ಸ್ವತಂತ್ರವಾಗಿದೆ ಎಂದು ರಷ್ಯಾ ಪ್ರತಿಪಾದಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿ ಅಮೆರಿಕದಿಂದ ಖರೀದಿಸಲು ಒಪ್ಪಿಕೊಂಡಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ರಷ್ಯಾ ಈ ಪ್ರತಿಕ್ರಿಯೆ ನೀಡಿದೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡಿ, “ಭಾರತದ ಏಕೈಕ ತೈಲ ಪಾಲುದಾರ ರಷ್ಯಾ ಅಲ್ಲ, ಭಾರತ ಸದಾ ವಿವಿಧ ಮೂಲಗಳಿಂದ ಇಂಧನ ಪಡೆಯುತ್ತಿದೆ. ಖರೀದಿ ಮೂಲಗಳಲ್ಲಿನ ಬದಲಾವಣೆ ಅಸಾಮಾನ್ಯವೇನಲ್ಲ” ಎಂದಿದ್ದಾರೆ.
ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಕೂಡ ಭಾರತ-ರಷ್ಯಾ ಇಂಧನ ಸಹಕಾರವು ಉಭಯ ದೇಶಗಳಿಗೆ ಲಾಭದಾಯಕ ಹಾಗೂ ಜಾಗತಿಕ ಮಾರುಕಟ್ಟೆಯ ಸ್ಥಿರತೆಗೆ ಪೂರಕವಾಗಿದೆ ಎಂದು ಬೆಂಬಲ ಸೂಚಿಸಿದ್ದಾರೆ. ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವ ಬಗ್ಗೆ ಭಾರತದಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕದೊಂದಿಗೆ ಭಾರತ ಸುಂಕ ಕಡಿತದ ಒಪ್ಪಂದ ಮಾಡಿಕೊಂಡಿದ್ದರೂ, ರಷ್ಯಾದೊಂದಿಗಿನ ಇಂಧನ ಸಂಬಂಧ ಮುಂದುವರಿಯುವ ಸೂಚನೆಗಳು ಕಂಡುಬರುತ್ತಿವೆ.