ದಾವಣಗೆರೆಯ ಪ್ರತಿಭಾನ್ವಿತ ಯುವತಿ ಆಂಚಲ್ ಕುಮಾರಿ (26) ಇಂದು ಲೌಕಿಕ ಜೀವನದ ಸಕಲ ಸುಖಗಳನ್ನು ತ್ಯಜಿಸಿ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ದಾವಣಗೆರೆಯ ಚೌಕಿಪೇಟೆಯ ಹೆಸರಾಂತ ಚಿನ್ನದ ವ್ಯಾಪಾರಿ ಮುಕೇಶ್ ಮತ್ತು ಸುನಿತಾ ದಂಪತಿಯ ಪುತ್ರಿಯಾಗಿರುವ ಆಂಚಲ್, ಬಿಐಇಟಿ (BIET) ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿ ಟಾಪರ್ ಆಗಿ ಹೊರಹೊಮ್ಮಿದ್ದರು. ಸುಂದರ ಭವಿಷ್ಯ ಮತ್ತು ಶ್ರೀಮಂತಿಕೆಯ ನಡುವೆಯೂ ಇತ್ತೀಚೆಗೆ ಅಧ್ಯಾತ್ಮದತ್ತ ತೀವ್ರ ಒಲವು ಬೆಳೆಸಿಕೊಂಡಿದ್ದ ಅವರು, ಸಂಸಾರದ ಸುಖಕ್ಕಿಂತ ಸನ್ಯಾಸತ್ವದ ಶಾಂತಿ ಮಿಗಿಲೆಂದು ಈ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.
ಇಂದು ಗುಜರಾತ್‌ನ ಸೂರತ್‌ನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಪೂಜ್ಯ ಕುಲಚಂದ್ರ ಸುರೇಶ್ವರ್ಜಿ ಮಹಾರಾಜ್ ಅವರಿಂದ ಆಂಚಲ್ ಸನ್ಯಾಸ ದೀಕ್ಷೆ ಪಡೆದರು. ತಂದೆ-ತಾಯಿ ಮತ್ತು ಆಸ್ತಿಪಾಸ್ತಿಗಳ ವ್ಯಾಮೋಹ ತೊರೆದಿರುವ ಇವರು, ಸನ್ಯಾಸಿಗಳ ಮುಖದಲ್ಲಿನ ಮುಗ್ಧ ನಗು ಮತ್ತು ನೆಮ್ಮದಿಯೇ ತಮ್ಮ ಜೀವನದ ಗುರಿ ಎಂದು ತೀರ್ಮಾನಿಸಿದ್ದಾರೆ. ಮುಕೇಶ್ ಅವರ ಮೂವರು ಪುತ್ರಿಯರಲ್ಲಿ ಮೊದಲ ಇಬ್ಬರಿಗೆ ಈಗಾಗಲೇ ಮದುವೆಯಾಗಿದ್ದು, ಕೊನೆಯ ಮಗಳಾದ ಆಂಚಲ್ ಸನ್ಯಾಸತ್ವ ಸ್ವೀಕರಿಸಿರುವುದು ಇಡೀ ದಾವಣಗೆರೆ ಜಿಲ್ಲೆಯಲ್ಲಿ ಮತ್ತು ಸಮಾಜದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದ್ದು, ಅವರ ವೈರಾಗ್ಯದ ಹಾದಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.