ನಿವೃತ್ತ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಬಾಲಕೃಷ್ಣ ರೈ ನಿಧನ
ಕಾಣಿಯೂರು, ಏ.17: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಚಾರ್ವಾಕ ಗ್ರಾಮದ ಕಾಸ್ಪಾಡಿಗುತ್ತು ನಿವಾಸಿ ಬಾಲಕೃಷ್ಣ ರೈ (64) ಅವರು ಹೃದಯಾಘಾತದಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು.
ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿಮಧ್ಯೆ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಬಾಲಕೃಷ್ಣ ರೈ ಅವರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದು, ಶಾಖಾ ವ್ಯವಸ್ಥಾಪಕ ಹಾಗೂ ಸಹಾಯಕ ಕಾರ್ಯನಿರ್ವಾಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದ ಅವರು ಒಡಿಯೂರು ಗ್ರಾಮ ವಿಕಾಸ ಚಾರ್ವಾಕ ಘಟ ಸಮಿತಿ ಅಧ್ಯಕ್ಷ ಹಾಗೂ ವಲಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಸುಧಾ, ಪುತ್ರ ಶಿವಕಿರಣ್ ರೈ, ಪುತ್ರಿ ಶಿಶ್ಮಿತಾ ರೈ ಹಾಗೂ ಸಹೋದರರಾದ ಕುಸುಮಾಧರ ರೈ (ಚಾರ್ವಾಕ ಅಮರ ಕಾಸ್ಪಾಡಿ ಜೋಡುದೈವಗಳ ಆಡಳಿತದಾರ) ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.