ಶ್ರೀನಿವಾಸಪುರ: ಮಾನವೀಯತೆಯೇ ಮರೆತ ಘಟನೆಯೊಂದರಲ್ಲಿ, ಹೆತ್ತ ಮಗುವನ್ನೇ ಹಣಕ್ಕಾಗಿ ಮಾರಾಟ ಮಾಡಿದ ದಂಪತಿ ಹಾಗೂ ಮಧ್ಯವರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸಪುರ ಪಟ್ಟಣದ ನೀತು ಮತ್ತು ರಾಘವೇಂದ್ರ ಎಂಬ ದಂಪತಿಗೆ ಐದು ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಈಗಾಗಲೇ ಇಬ್ಬರು ಮಕ್ಕಳಿದ್ದ ಕಾರಣ, ಮೂರನೇ ಮಗುವನ್ನು ಸಾಕಲು ಇಷ್ಟವಿಲ್ಲದೆ ದಂಪತಿ ಈ ಅಮಾನವೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪತಿ ರಾಘವೇಂದ್ರ ತನಗೆ ಪರಿಚಿತನಿದ್ದ ನಾರಾಯಣಸ್ವಾಮಿ ಎಂಬ ಮಧ್ಯವರ್ತಿಯ ಮೂಲಕ ಕೇವಲ ಎರಡು ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ. ಈ ಮಧ್ಯವರ್ತಿಯು ಮಗುವನ್ನು ಮತ್ತಷ್ಟು ಹೆಚ್ಚಿನ ಬೆಲೆಗೆ ಚಿಂತಾಮಣಿ ಮೂಲದ ವ್ಯಕ್ತಿಯೊಬ್ಬರಿಗೆ ಮಾರಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಗು ಕಾಣೆಯಾದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಶ್ರೀನಿವಾಸಪುರ ಪೊಲೀಸರು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಪೊಲೀಸರು ದಂಪತಿ ಹಾಗೂ ಮಧ್ಯವರ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮಾರಾಟವಾಗಿರುವ ಮಗುವನ್ನು ಸುರಕ್ಷಿತವಾಗಿ ಪತ್ತೆಹಚ್ಚಿ ಮರಳಿ ಪಡೆಯಲು ವಿಶೇಷ ತಂಡ ರಚಿಸಲಾಗಿದೆ. ಈ ಪ್ರಕರಣದ ಹಿಂದೆ ದೊಡ್ಡ ಮಕ್ಕಳ ಮಾರಾಟ ಜಾಲವಿರುವ ಶಂಕೆ ವ್ಯಕ್ತವಾಗಿದ್ದು, ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆತ್ತವರಿಂದಲೇ ಮಗು ಮಾರಾಟವಾದ ಈ ಘಟನೆ ಜಿಲ್ಲಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.