Home ಮನರಂಜನೆಮತ್ತೇ ರಂಗನಾಗಿ‌ ಮಿಂಚಲಿದ್ದಾರೆ ಫಾಹದ್ ಫಾಸಿಲ್; ‘ಆವೇಶಮ್–2’ಗೆ ಅಧಿಕೃತ ಘೋಷಣೆ!

ಮತ್ತೇ ರಂಗನಾಗಿ‌ ಮಿಂಚಲಿದ್ದಾರೆ ಫಾಹದ್ ಫಾಸಿಲ್; ‘ಆವೇಶಮ್–2’ಗೆ ಅಧಿಕೃತ ಘೋಷಣೆ!

Fahadh Faasil to Return as Ranga; ‘Aavesham 2’ Officially Announced!

by Editor

 

ಕೊಚ್ಚಿ ಫೆ.09: ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿನಯ ಶೈಲಿಯಿಂದ ಪ್ರತ್ಯೇಕ ಪ್ರೇಕ್ಷಕರ ವರ್ಗವನ್ನು ಹೊಂದಿರುವ ಪ್ರತಿಭಾವಂತ ನಟ ಫಾಹದ್ ಫಾಸಿಲ್ ಅವರ ಚಿತ್ರಗಳಿಗೆ ಅಪಾರ ಬೇಡಿಕೆ ಇದೆ. ಸಹಜ ಅಭಿನಯದಿಂದ ಜನಮನ ಗೆದ್ದಿರುವ ಫಾಹದ್ ಫಾಸಿಲ್ ಸದ್ಯ ಮಲಯಾಳಂ ಹಾಗೂ ತೆಲುಗು ಚಿತ್ರರಂಗಗಳಲ್ಲಿ ಹಲವು ಚಿತ್ರಗಳಲ್ಲಿ ನಿರತರಾಗಿದ್ದಾರೆ.

ಮಲಯಾಳಂ ಚಿತ್ರರಂಗದ ಪ್ರಮುಖ ನಟರಾಗಿರುವ ಫಾಹದ್, ‘ಪುಷ್ಪ’ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ಪ್ರಸ್ತುತ ಅವರು ‘ಡೊಂಟ್ ಟ್ರಬಲ್ ದಿ ಟ್ರಬಲ್’ ಎಂಬ ಶೀರ್ಷಿಕೆಯ ತೆಲುಗು ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

2024ರಲ್ಲಿ ಫಾಹದ್ ಫಾಸಿಲ್ ‘ಆವೇಶಮ್’ ಎಂಬ ಹಾಸ್ಯ–ಗ್ಯಾಂಗ್‌ಸ್ಟರ್ ಚಿತ್ರದಲ್ಲಿ ‘ರಂಗ’ ಎಂಬ ಡಾನ್ ಪಾತ್ರದಲ್ಲಿ ಕಾಣಿಸಿಕೊಂಡು ಭಾರೀ ಮೆಚ್ಚುಗೆ ಗಳಿಸಿದ್ದರು. ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರ ವಾಣಿಜ್ಯವಾಗಿ ದೊಡ್ಡ ಯಶಸ್ಸು ದಾಖಲಿಸಿತ್ತು. ಚಿತ್ರವನ್ನು ನಿರ್ದೇಶಕ ಜಿತು ಮಾಧವನ್ ನಿರ್ದೇಶಿಸಿದ್ದು, ಫಾಹದ್ ಅವರು ಅಭಿನಯದ ಜೊತೆಗೆ ನಿರ್ಮಾಣದಲ್ಲೂ ಭಾಗಿಯಾಗಿದ್ದರು.

ಈ ಯಶಸ್ಸಿನ ಹಿನ್ನೆಲೆಯಲ್ಲಿ ‘ಆವೇಶಮ್’ ಚಿತ್ರದ ಎರಡನೇ ಭಾಗದ ಬಗ್ಗೆ ಚಿತ್ರರಂಗದಲ್ಲಿ ಚರ್ಚೆ ಜೋರಾಗಿತ್ತು. ಇದೀಗ ಈ ಕುರಿತು ಫಾಹದ್ ಫಾಸಿಲ್ ಸ್ವತಃ ಅಧಿಕೃತ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಆವೇಶಮ್–2’ ನಿರ್ಮಾಣವಾಗುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದ್ದಾರೆ. 2027 ಅಥವಾ 2028ರಲ್ಲಿ ‘ಆವೇಶಮ್–2’ ಚಿತ್ರೀಕರಣ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಈ ಘೋಷಣೆಯಿಂದ ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.

ಇನ್ನೊಂದೆಡೆ, ನಿರ್ದೇಶಕ ಜಿತು ಮಾಧವನ್ ಸದ್ಯ ನಟ ಸೂರ್ಯ ಅವರೊಂದಿಗೆ ಹೊಸ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ಆ ಚಿತ್ರ ಪೂರ್ಣಗೊಂಡ ಬಳಿಕ ಫಾಹದ್ ಫಾಸಿಲ್ ಅಭಿನಯದ ‘ಆವೇಶಮ್–2’ ಚಿತ್ರೀಕರಣಕ್ಕೆ ಕೈಹಾಕಲಾಗುವುದು ಎಂದು ವರದಿಗಳು ತಿಳಿಸಿವೆ.

You may also like

Leave a Comment