80
ಪುಣೆ, ಫೆ. 9: ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಹಾಗೂ ಹಿರಿಯ ರಾಜಕೀಯ ನಾಯಕ ಶರದ್ ಪವಾರ್ ಅವರು ಗಂಟಲು ಸೋಂಕು, ನಿರಂತರ ಕೆಮ್ಮು ಮತ್ತು ಉಸಿರಾಟದ ತೊಂದರೆಯಿಂದ ಪುಣೆಯ ಖಾಸಗಿ ಆಸ್ಪತ್ರೆಯಾದ ರೂಬಿ ಹಾಲ್ ಕ್ಲಿನಿಕ್ ಗೆ ಇಂದು ದಾಖಲಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ 85 ವರ್ಷದ ಶರದ್ ಪವಾರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಬಾರಾಮತಿಯಿಂದ ಪುಣೆಗೆ ಕರೆದೊಯ್ಯಲಾಗಿದೆ.
ಆಸ್ಪತ್ರೆಯಲ್ಲಿ ವೈದ್ಯರ ವಿಶೇಷ ತಂಡವು ಅವರ ಆರೋಗ್ಯದ ಮೇಲೆ ತೀವ್ರ ನಿಗಾ ವಹಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.
ಆಸ್ಪತ್ರೆಗೆ ದಾಖಲಿಸುವ ವೇಳೆ ಶರದ್ ಪವಾರ್ ಅವರ ಪುತ್ರಿ ಸುಪ್ರಿಯ ಸುಲೆ, ಪತ್ನಿ ಫ್ರತಿಭಾ ಪವಾರ್ ಹಾಗೂ ಅಳಿಯ ಸದಾನಂದ ಸುಲೆ ಅವರು ಜೊತೆಯಲ್ಲಿದ್ದರು ಎಂದು ತಿಳಿದು ಬಂದಿದೆ.
ಹಿರಿಯ ನಾಯಕನ ಆರೋಗ್ಯದ ಕುರಿತು ರಾಜಕೀಯ ವಲಯ ಹಾಗೂ ಅಭಿಮಾನಿಗಳು ಕಾಳಜಿ ವ್ಯಕ್ತಪಡಿಸಿದ್ದು, ಶೀಘ್ರ ಗುಣಮುಖರಾಗಲಿ ಎಂದು ಶುಭ ಹಾರೈಕೆಗಳು ವ್ಯಕ್ತವಾಗಿವೆ.