ಕಾಣಿಯೂರು ಹಾಲು ಉತ್ಪಾದಕರ ಸಂಘ ರಸಪ್ರಶ್ನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ

ಸುರೇಶ್ ಓಡಬಾಯಿ
ಕಾಣಿಯೂರು :ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಭಾನುವಾರ ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಸಹಕಾರಿ ಕ್ರೀಡೋತ್ಸವದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಣಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘ ಪ್ರಥಮ ಬಹುಮಾನ ತಮ್ಮದಾಗಿಸಿಕೊಂಡಿದೆ.ಮೂರು ಸುತ್ತುಗಳಲ್ಲಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಡಬ ತಾಲೂಕಿನ ಕಾಣಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಸ್ಪರ್ಧಿಸಿದ್ದ ಸಂಘದ ಅಧ್ಯಕ್ಷರಾದ ಸುರೇಶ್ ಓಡಬಾಯಿ ಪ್ರಥಮ ಸ್ಥಾನ ಪಡೆದರು. ಮಂಗಳೂರು ಯೆಯ್ಯಾಡಿಯ ಪ್ರಣವ ಸೌಹಾರ್ದ ಸಹಕಾರಿ ಸಂಘವು ದ್ವಿತೀಯ ಸ್ಥಾನ ಪಡೆಯಿತು. ವಿಟ್ಲ ಗ್ರಾಮೀಣ ಸಹಕಾರಿ ಸಂಘ ತೃತೀಯ ಸ್ಥಾನ ಪಡೆಯಿತು. ಒಟ್ಟು ಹದಿನೇಳು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸಹಕಾರಿ ಕ್ಷೇತ್ರ, ಪ್ರಚಲಿತ ವಿದ್ಯಮಾನ ಹಾಗೂ ಸಾಮಾನ್ಯ ಜ್ಞಾನದ ವಿಷಯದಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಮೋಹನ್‌ದಾಸ್ ಮರಕಡ ಕ್ವಿಜ್ ಮಾಸ್ಟರ್ ಆಗಿ ಸ್ಪರ್ಧೆಗಳನ್ನು ನಡೆಸಿಕೊಟ್ಟರು.ಬಹುಮಾನ ವಿತರಣಾ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್, ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷರಾದ ಜಿ.ಆರ್ ಪ್ರಸಾದ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಸುಧಾಕರ ರೈ, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ, ಮಂಗಳೂರು ಜನತಾ ಬಜಾರ್ ಅಧ್ಯಕ್ಷ ಪ್ರಸನ್ನ ಎಣ್ಣೂರು ಉಪಸ್ಥಿತರಿದ್ದರು.
ಉದ್ಘಾಟನೆ :ಬೆಳಿಗ್ಗೆ ಕಾರ್ಯಕ್ರಮವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಉದ್ಘಾಟಿಸಿದರು.ರಾಷ್ಟ್ರೀಯ ವಾಲಿಬಾಲ್ ಆಟಗಾರ ಸುಪ್ರಿತ್ ಆಳ್ವಾ ಕ್ರೀಡಾ ಜ್ಯೋತಿ ಬೆಳಗಿಸಿದರು. ಸಂಸದರಾದ ಬ್ರಿಜೇಶ್ ಚೌಟ, ಮಂಗಳೂರು ಶಾಸಕರಾದ ವೇದವ್ಯಾಸ ಕಾಮತ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಕ್ಯಾಂಪ್ಕೋ, ಕೆಎಂಎಫ್, ಮೀನುಗಾರಿಕ ಫೆಡರೇಷನ್ ಸೇರಿದಂತೆ ಜಿಲ್ಲೆ ಮತ್ತು ಮಹಾನಗರ ಪಾಲಿಕಾ ವ್ಯಾಪ್ತಿಯ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.