ಅರಣ್ಯ ಹಂಗಾಮಿ ನೌಕರರ ಮುಷ್ಕರ: ಬೇಡಿಕೆಗಳ ಪರಿಶೀಲನೆಗೆ ಸಮಿತಿ ರಚನೆ
10 ವರ್ಷ ಸೇವೆ ಸಲ್ಲಿಸಿದ ಹೊರಗುತ್ತಿಗೆ ನೌಕರರ ನ್ಯಾಯಸಮ್ಮತ ಬೇಡಿಕೆಗಳ ಪರಿಶೀಲನೆ
ಅರಣ್ಯ ಇಲಾಖೆಯಲ್ಲಿ ಮುಂಚೂಣಿ ಸಿಬ್ಬಂದಿಯಾಗಿ, ವಾಹನ ಚಾಲಕರಾಗಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಂಗಾಮಿ ನೌಕರರು ವಿವಿಧ ಬೇಡಿಕೆ ಮುಂದಿಟ್ಟು ಮುಷ್ಕರ ನಡೆಸುತ್ತಿದ್ದಾರೆ.
ಅರಣ್ಯ ಇಲಾಖೆಯಲ್ಲಿ 2017ಕ್ಕೆ ಮೊದಲು ಮುಂಚೂಣಿ ಸಿಬ್ಬಂದಿಯಾಗಿ ಮತ್ತು ಇಲಾಖೆಯ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ಮತ್ತು 10 ವರ್ಷ ಸೇವೆ ಪೂರೈಸಿರುವವರ ಬೇಡಿಕೆ ನ್ಯಾಯೋಚಿತವಾಗಿದೆಯೇ, ಇವರನ್ನು ಇಲಾಖೆಯ ವತಿಯಿಂದಲೇ ಹಿಂದಿನಂತೆ ನೇಮಕ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆಯೇ ಮತ್ತು ಇವರಿಗೆ ಸೇವಾ ಹಿರಿತನದ ಆಧಾರದ ಮೇಲೆ ಹೆಚ್ಚಿನ ವೇತನ, ಭತ್ಯೆ ನೀಡಲು ಅವಕಾಶ ಇದೆಯೇ ಎಂಬ ಎಲ್ಲ ಅಂಶಗಳ ಬಗ್ಗೆ ಪರಿಶೀಲಿಸಿ ನ್ಯಾಯ ಒದಗಿಸುವುದು ಸೂಕ್ತ ಎಂದು ಭಾವಿಸಿದ್ದು,

ಈ ಸಂಬಂಧ ಅರಣ್ಯಪಡೆ ಮುಖ್ಯಸ್ಥರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿ, ಕಾನೂನಾತ್ಮಕ ಮತ್ತು ಮಾನವೀಯ ನೆಲೆಗಟ್ಟಿನಲ್ಲಿ ಪರಾಮರ್ಶಿಸಿ, ಅಡ್ವಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ನ್ಯಾಯಸಮ್ಮತವಾದ ವರದಿಯನ್ನು 7 ದಿನಗಳ ಒಳಗಾಗಿ ಸಲ್ಲಿಸಲು ಹಾಗೂ ವನ್ಯಜೀವಿ ವಿಭಾಗದಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿರುವವರಿಗೂ ಅಪಾಯ ಭತ್ಯೆ ವಿಸ್ತರಿಸಲು ಸೂಚಿಸಲಾಗಿದೆ.
*ಈಶ್ವರ ಬಿ. ಖಂಡ್ರೆ*
ಅರಣ್ಯ ಸಚಿವರು