ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳ ಹರಣ ಮುಂದುವರಿದಿದ್ದು, ಯುವತಿಯರಿಗೆ ಟೇಕ್ವಾಂಡೋ ತರಬೇತಿ ನೀಡುತ್ತಿದ್ದ 22 ವರ್ಷದ ಖದೀಜಾ ಅಹ್ಮದ್ದಾದಾ ಅವರಿಗೆ ತಾಲಿಬಾನ್ ಆಡಳಿತ ‘ಕಲ್ಲು ಹೊಡೆದು ಕೊಲ್ಲುವ’ (Stoning) ಭೀಕರ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ. ಈ ಘಟನೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹೆರಾತ್ ನಗರದಲ್ಲಿ ರಹಸ್ಯವಾಗಿ ಹೆಣ್ಣುಮಕ್ಕಳಿಗೆ ಆತ್ಮರಕ್ಷಣೆ ಮತ್ತು ಸಮರ ಕಲೆಗಳನ್ನು ಕಲಿಸುತ್ತಿದ್ದ ಖದೀಜಾ ಅವರನ್ನು ‘ಇಸ್ಲಾಮಿಕ್ ಕಾನೂನು ಉಲ್ಲಂಘನೆ’ಯ ಆರೋಪದಡಿ ಬಂಧಿಸಲಾಗಿದೆ. ಕೇವಲ ಖದೀಜಾ ಮಾತ್ರವಲ್ಲದೆ, ಅವರಿಗೆ ಬೆಂಬಲ ನೀಡಿದ ತಂದೆ ಮತ್ತು ಮನೆಯ ಮಾಲೀಕರನ್ನೂ ಸಹ ಬಂಧಿಸಿ ಕಾರಾಗೃಹಕ್ಕೆ ತಳ್ಳಲಾಗಿದೆ. ತಾಲಿಬಾನ್ ನಿಯಮದಂತೆ ಮಹಿಳೆಯರು ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಕ್ರೌರ್ಯದ ವಿರುದ್ಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರತಿನಿಧಿ ರಿಚರ್ಡ್ ಬೆನೆಟ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಘಟನೆಗಳು ಧ್ವನಿ ಎತ್ತಿವೆ. “ಕ್ರೀಡೆ ಕಲಿಸುವುದು ಅಪರಾಧವಲ್ಲ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ತೀವ್ರಗೊಂಡಿದ್ದು, ಖದೀಜಾ ಅವರ ಜೀವ ಉಳಿಸಲು ಜಾಗತಿಕ ಸಮುದಾಯದ ತುರ್ತು ಹಸ್ತಕ್ಷೇಪದ ಅಗತ್ಯವಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರು ಮನವಿ ಮಾಡಿದ್ದಾರೆ.