83
ಗದಗ: ರಾಜ್ಯದ ಅಲ್ಪಸಂಖ್ಯಾತ ಇಲಾಖೆಯ ವ್ಯಾಪ್ತಿಯ ಎಲ್ಲಾ ವಸತಿ ಶಾಲೆಗಳಿಗೆ ಶೀಘ್ರದಲ್ಲೇ ಡಿಜಿಟಲ್ ಕ್ಲಾಸ್‌ರೂಮ್ ಸೌಲಭ್ಯ ಕಲ್ಪಿಸಲಾಗುವುದು ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಹರ್ತಿ ಗ್ರಾಮದಲ್ಲಿ ನೂತನ ಅಲ್ಪಸಂಖ್ಯಾತರ ಹೆಣ್ಣುಮಕ್ಕಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ₹4,500 ಕೋಟಿ ಬಜೆಟ್ ಮೀಸಲಿಟ್ಟಿದೆ. ಪ್ರಸ್ತುತ 2.38 ಲಕ್ಷಕ್ಕೂ ಅಧಿಕ ಮಕ್ಕಳು ವಸತಿ ಶಾಲೆಗಳಲ್ಲಿ ಕಲಿಯುತ್ತಿದ್ದು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೊಸದಾಗಿ 100 ವಸತಿ ಶಾಲೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ವಿವರಿಸಿದರು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.