ಅಮೆರಿಕಾದ ಮಿಸೌರಿಯ ಕನ್ಸಾಸ್ ಸಿಟಿಯಲ್ಲಿ ಸಿನಿಮಾ ಕಥೆಯನ್ನೂ ಮೀರಿಸುವಂತಹ ವಿಲಕ್ಷಣ ವಂಚನೆಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಮಡೌ ಡಿಯಲ್ಲೋ ಎಂಬ ಚಾಣಾಕ್ಷ ಕಳ್ಳನೋರ್ವ ಒಂದೇ ಕಾರನ್ನು ಆನ್‌ಲೈನ್‌ನಲ್ಲಿ ಬರೋಬ್ಬರಿ ಎಂಟು ಜನರಿಗೆ ಮಾರಾಟ ಮಾಡಿ, ಮಾರಾಟವಾದ ಕೆಲವೇ ಗಂಟೆಗಳಲ್ಲಿ ಅದನ್ನು ಮತ್ತೆ ಕದಿಯುತ್ತಿದ್ದ. ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದ ಈತ, ನಕಲಿ ದಾಖಲೆಗಳನ್ನು ನೀಡಿ ನಂಬಿಕೆ ದ್ರೋಹ ಎಸಗುತ್ತಿದ್ದ. ಈತನ ವಂಚನೆಯ ಜಾಲ ಎಷ್ಟು ವ್ಯವಸ್ಥಿತವಾಗಿತ್ತೆಂದರೆ, ಕಾರು ಖರೀದಿಸಿದವರು ಸಂಭ್ರಮಿಸುವ ಮೊದಲೇ ವಾಹನವು ಅವರ ಕೈ ತಪ್ಪಿ ಮತ್ತೆ ಕಳ್ಳನ ಪಾಲಾಗುತ್ತಿತ್ತು.
ಡಿಯಲ್ಲೋ ತನ್ನ ಬಳಿಯಿದ್ದ 2013ರ ಹೋಂಡಾ ಸಿವಿಕ್ ಮತ್ತು ಬ್ಯೂಕ್ ವೆರಾನೊ ಕಾರುಗಳನ್ನು ಮಾರಾಟಕ್ಕೆ ಇಡುತ್ತಿದ್ದ. ಖರೀದಿದಾರರನ್ನು ವೈಯಕ್ತಿಕವಾಗಿ ಭೇಟಿಯಾಗಿ, ಕಾನೂನುಬದ್ಧ ದಾಖಲೆಗಳನ್ನು ನೀಡುವಂತೆ ನಟಿಸಿ ಸಾವಿರಾರು ಡಾಲರ್ ಹಣವನ್ನು ವಸೂಲಿ ಮಾಡುತ್ತಿದ್ದ. ಆದರೆ, ಅಸಲಿ ಆಟ ಶುರುವಾಗುತ್ತಿದ್ದುದೇ ಹಣ ಕೈ ಸೇರಿದ ನಂತರ. ಈತ ತನ್ನ ಬಳಿ ಇದ್ದ ಪರ್ಯಾಯ ಕೀ (Duplicate Key) ಬಳಸಿ, ಕಾರು ಮಾರಾಟವಾದ ಕೇವಲ 2 ರಿಂದ 3 ಗಂಟೆಗಳಲ್ಲಿ ಅಥವಾ ಗರಿಷ್ಠ 24 ಗಂಟೆಯೊಳಗೆ ಹೊಸ ಮಾಲೀಕರ ಮನೆಯಿಂದಲೇ ಅದನ್ನು ಮತ್ತೆ ಕದ್ದು ಪರಾರಿಯಾಗುತ್ತಿದ್ದ. ಒಂದು ಪ್ರಕರಣದಲ್ಲಂತೂ ಕಾರು ಮಾರಾಟವಾದ ಕೇವಲ 7 ಗಂಟೆಯಲ್ಲಿ ಕಳವಾಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
2025ರ ಮೇ ಮತ್ತು ಜೂನ್ ತಿಂಗಳಲ್ಲಿ ಸರಣಿ ದೂರುಗಳು ದಾಖಲಾದ ನಂತರ ಪೊಲೀಸರು ತನಿಖೆ ಕೈಗೊಂಡಾಗ ಈ ನಕಲಿ ಮಾರಾಟಗಾರನ ಬಣ್ಣ ಬಯಲಾಗಿದೆ. ಫೇಸ್‌ಬುಕ್ ಪೋಸ್ಟ್‌ಗಳು ಮತ್ತು ನೀಡಲಾದ ಕಾಗದಪತ್ರಗಳ ಹೋಲಿಕೆಯನ್ನು ಆಧರಿಸಿ ಪೊಲೀಸರು ಡಿಯಲ್ಲೋನನ್ನು ಬಂಧಿಸಿದ್ದಾರೆ. ಪ್ರಸ್ತುತ ಈತನ ಮೇಲೆ ಮೋಟಾರು ವಾಹನ ಕಾಯ್ದೆಯಡಿ 14ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಒಂದು ವೇಳೆ ಎಲ್ಲಾ ಆರೋಪಗಳು ಸಾಬೀತಾದಲ್ಲಿ ಈ ಕಿಲಾಡಿ ಕಳ್ಳನಿಗೆ ಬರೋಬ್ಬರಿ 98 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಸದ್ಯ ಈತನ “ಚಾಣಾಕ್ಷ” ಬುದ್ಧಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.