Home ಬ್ರೇಕಿಂಗ್ ನ್ಯೂಸ್ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸರೇ ಇಲ್ಲ! ವರ್ಗಾವಣೆ ವಿಳಂಬಕ್ಕೆ ಗ್ರಹಣ….

ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸರೇ ಇಲ್ಲ! ವರ್ಗಾವಣೆ ವಿಳಂಬಕ್ಕೆ ಗ್ರಹಣ….

by Editor

ಬೆಂಗಳೂರು: ರಾಜ್ಯ ರಾಜಧಾನಿಯ ಕಾನೂನು ಮತ್ತು ಸುವ್ಯವಸ್ಥೆಯ ಕಾವಲುಗಾರರಾದ ಪೊಲೀಸ್ ಇಲಾಖೆಯಲ್ಲಿ ಇನ್ಸ್‌ಪೆಕ್ಟರ್‌ಗಳ ತೀವ್ರ ಕೊರತೆ ಎದುರಾಗಿದೆ. ನಗರದ ಬ್ಯಾಡರಹಳ್ಳಿ, ಯಶವಂತಪುರ, ಮಲ್ಲೇಶ್ವರ ಮತ್ತು ಡಿ.ಜೆ. ಹಳ್ಳಿ ಸೇರಿದಂತೆ 15ಕ್ಕೂ ಹೆಚ್ಚು ಪ್ರಮುಖ ಠಾಣೆಗಳಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗಳು ಹಲವು ತಿಂಗಳಿಂದ ಖಾಲಿ ಬಿದ್ದಿವೆ. ಅಮಾನತು, ನಿವೃತ್ತಿ ಮತ್ತು ಬಡ್ತಿಯಂತಹ ಕಾರಣಗಳಿಂದ ಈ ಹುದ್ದೆಗಳು ಭರ್ತಿಯಾಗದೆ ಉಳಿದಿದ್ದು, ಕೇವಲ ಇನ್ಸ್‌ಪೆಕ್ಟರ್ ಮಾತ್ರವಲ್ಲದೆ ಶೇಷಾದ್ರಿಪುರಂ ಮತ್ತು ಕೆ.ಜಿ. ಹಳ್ಳಿಯಂತಹ ಸೂಕ್ಷ್ಮ ಪ್ರದೇಶಗಳ ಎಸಿಪಿ ಹುದ್ದೆಗಳೂ ಖಾಲಿ ಇರುವುದು ಆತಂಕಕ್ಕೆ ಕಾರಣವಾಗಿದೆ.

ಪ್ರಸ್ತುತ ಸರ್ಕಾರವು ಖಾಲಿ ಇರುವ ಠಾಣೆಗಳಿಗೆ ಬೇರೆ ಠಾಣೆಗಳ ಅಧಿಕಾರಿಗಳನ್ನು ‘ಹೆಚ್ಚುವರಿ ಹೊಣೆ’ (OOD) ನೀಡಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ಹಾಲಿ ಇರುವ ಇನ್ಸ್‌ಪೆಕ್ಟರ್‌ಗಳು ಎರಡೆರಡು ಠಾಣೆಗಳ ಜವಾಬ್ದಾರಿ ನಿರ್ವಹಿಸಲಾರದೆ ಕೆಲಸದ ಒತ್ತಡದಿಂದ ಹೈರಾಣಾಗಿದ್ದಾರೆ. ದಿನವಿಡೀ ಪ್ರಕರಣಗಳ ತನಿಖೆ, ಬಂದೋಬಸ್ತ್ ಮತ್ತು ಆಡಳಿತಾತ್ಮಕ ಕೆಲಸಗಳ ನಡುವೆ ಎರಡು ಠಾಣೆಗಳನ್ನು ನಿಭಾಯಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ. ಈ ಅವ್ಯವಸ್ಥೆಯಿಂದಾಗಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ.

ಇನ್ನೊಂದೆಡೆ, ಪೊಲೀಸ್ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೂ ರಾಜಕೀಯ ಗ್ರಹಣ ಹಿಡಿದಿದೆ. ನಿಯಮದ ಪ್ರಕಾರ ಎರಡು ವರ್ಷಕ್ಕೊಮ್ಮೆ ವರ್ಗಾವಣೆ ನಡೆಯಬೇಕಿದ್ದರೂ, ಕಳೆದ 2.4 ವರ್ಷಗಳಿಂದ ಯಾವುದೇ ಪಟ್ಟಿ ಬಿಡುಗಡೆಯಾಗಿಲ್ಲ. ರಾಜಕೀಯ ನಾಯಕರ ನಡುವಿನ ಮುಸುಕಿನ ಗುದ್ದಾಟ ಮತ್ತು ತಮ್ಮ ಬೆಂಬಲಿಗ ಅಧಿಕಾರಿಗಳಿಗೆ ಆಯಕಟ್ಟಿನ ಜಾಗ ಕೊಡಿಸುವ ಹಠದಿಂದಾಗಿ ವರ್ಗಾವಣೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎನ್ನಲಾಗಿದೆ. ಈ ಅನಿಶ್ಚಿತತೆಯಿಂದಾಗಿ ಪೊಲೀಸ್ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿದ್ದು, ದಕ್ಷ ಅಧಿಕಾರಿಗಳು ಹೊಸ ಜವಾಬ್ದಾರಿಗಳಿಗಾಗಿ ಕಾಯುವಂತಾಗಿದೆ.

You may also like

Leave a Comment