Home ಬ್ರೇಕಿಂಗ್ ನ್ಯೂಸ್1997 ರ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಮಂಗಳೂರು ಪೊಲೀಸ್

1997 ರ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಮಂಗಳೂರು ಪೊಲೀಸ್

by Editor

ಮಂಗಳೂರು: ಕೊಲೆ, ದರೋಡೆಯಂತಹ ಭೀಕರ ಕೃತ್ಯಗಳ ಮೂಲಕ ಇಡೀ ರಾಜ್ಯವನ್ನೇ ನಡುಗಿಸಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್‌ನ ಪ್ರಮುಖ ಆರೋಪಿಯೊಬ್ಬನನ್ನು ಸುಮಾರು ಮೂರು ದಶಕಗಳ ನಂತರ ಪೊಲೀಸರು ಬಂಧಿಸಿದ್ದಾರೆ. 29 ವರ್ಷಗಳಿಂದ ಕಾನೂನಿನ ಕಣ್ಣು ತಪ್ಪಿಸಿ ತಲೆಮರೆಸಿಕೊಂಡಿದ್ದ ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪನನ್ನು ಮಂಗಳೂರಿನ ಉರ್ವ ಪೊಲೀಸರು ಸಿನಿಮಾ ಶೈಲಿಯ ಕಾರ್ಯಾಚರಣೆಯ ಮೂಲಕ ಆಂಧ್ರಪ್ರದೇಶದಲ್ಲಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಮೇಲೆ ರಾಜ್ಯದ ವಿವಿಧೆಡೆ 13ಕ್ಕೂ ಹೆಚ್ಚು ಕೊಲೆ ಮತ್ತು ದರೋಡೆಯಂತಹ ಗಂಭೀರ ಪ್ರಕರಣಗಳು ದಾಖಲಾಗಿವೆ.

ಹಲವು ವರ್ಷಗಳ ಹಿಂದೆಯೇ ಪ್ರಕರಣವೊಂದರ ವಿಚಾರಣೆ ಮುಕ್ತಾಯಗೊಂಡು ನ್ಯಾಯಾಲಯವು ಈತನನ್ನು ದೋಷಿ ಎಂದು ಘೋಷಿಸಿತ್ತು. ಆದರೆ, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಚಾಣಾಕ್ಷತನ ಪ್ರದರ್ಶಿಸಿದ್ದ ಚಿಕ್ಕ ಹನುಮ, ತನ್ನ ಹೆಸರನ್ನು ‘ಕೆ. ಕೃಷ್ಣಪ್ಪ’ ಎಂದು ಬದಲಿಸಿಕೊಂಡು ನಾಪತ್ತೆಯಾಗಿದ್ದ. ಅಂದಿನಿಂದಲೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಈತನ ಪತ್ತೆಗಾಗಿ ಮಂಗಳೂರಿನ ಜೆಎಂಎಫ್‌ಸಿ (JMFC) ನ್ಯಾಯಾಲಯವು 2010ರಲ್ಲಿ ಎಲ್‌ಪಿಸಿ (LPC) ವಾರೆಂಟ್ ಹೊರಡಿಸಿತ್ತು. ತನ್ನ ಹಳೆಯ ಗುರುತುಗಳನ್ನು ಮರೆಮಾಚಿ ಅನ್ಯರಾಜ್ಯದಲ್ಲಿ ವಾಸವಿದ್ದರೂ, ಖಚಿತ ಮಾಹಿತಿ ಬೆನ್ನತ್ತಿದ ಉರ್ವ ಪೊಲೀಸರು ಅಂತಿಮವಾಗಿ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಳ್ಳೆಯಲ್ಲಿ ಈತನನ್ನು ಪತ್ತೆಹಚ್ಚಿದ್ದಾರೆ.

ದೀರ್ಘಕಾಲದ ಬಳಿಕ ಆರೋಪಿಯನ್ನು ಬಂಧಿಸಿದ ಉರ್ವ ಪೊಲೀಸ್ ತಂಡದ ದಕ್ಷತೆಯನ್ನು ಮಂಗಳೂರು ಪೊಲೀಸ್ ಕಮೀಷನರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಸಾಹಸಮಯ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಸೂಕ್ತ ಬಹುಮಾನ ನೀಡುವಂತೆ ರಾಜ್ಯದ ಡಿಜಿ ಮತ್ತು ಐಜಿಪಿಯವರಿಗೆ ಶಿಫಾರಸ್ಸು ಮಾಡಲಾಗಿದೆ. ದಂಡುಪಾಳ್ಯ ಗ್ಯಾಂಗ್‌ನ ಈ ಸದಸ್ಯನ ಬಂಧನವು ಹಳೆಯ ಪ್ರಕರಣಗಳಲ್ಲಿ ನ್ಯಾಯ ಸಿಗುವ ನಿರೀಕ್ಷೆಯನ್ನು ಮೂಡಿಸಿದ್ದು, ಈತನನ್ನು ಹೆಚ್ಚಿನ ವಿಚಾರಣೆಗಾಗಿ ಮಂಗಳೂರಿಗೆ ಕರೆತರಲಾಗಿದೆ.

You may also like

Leave a Comment