ವಾರಾಣಸಿ: ಎಂಬಿಬಿಎಸ್ ಸೀಟು ಪಡೆಯಬೇಕೆಂಬ ಹಠಕ್ಕೆ ಬಿದ್ದ ಯುವಕನೊಬ್ಬ, ಅಂಗವಿಕಲರ ಕೋಟಾದಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳಲು ತನ್ನ ಪಾದವನ್ನೇ ಕತ್ತರಿಸಿಕೊಂಡಿರುವ ಬೆಚ್ಚಿಬೀಳಿಸುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸೂರಜ್ ಭಾಸ್ಕರ್ ಎಂಬ ಈ ವಿದ್ಯಾರ್ಥಿ, ಮೊದಲು ತನ್ನ ಮೇಲೆ ಅಪರಿಚಿತರು ದಾಳಿ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿ ದಾರಿ ತಪ್ಪಿಸಲು ಯತ್ನಿಸಿದ್ದ. ಆದರೆ ಸತತ ತನಿಖೆಯ ನಂತರ, ವೈದ್ಯಕೀಯ ಸೀಟಿಗಾಗಿ ಆತನೇ ಮಾಡಿಕೊಂಡ ಸಂಚು ಇದೀಗ ಬಯಲಾಗಿದೆ.
ಜನವರಿ 14ರಂದು ನಡೆದ ಈ ಘಟನೆಯಲ್ಲಿ, ಸೂರಜ್ ಮೊದಲು ಅರಿವಳಿಕೆ (Anesthesia) ಚುಚ್ಚುಮದ್ದನ್ನು ತಾನೇ ಚುಚ್ಚಿಕೊಂಡು, ನೋವು ತಿಳಿಯದಂತೆ ಪಾದದ ಸ್ವಲ್ಪ ಭಾಗವನ್ನು ಚಾಕುವಿನಿಂದ ಕತ್ತರಿಸಿಕೊಂಡಿದ್ದ. ಡಿ-ಫಾರ್ಮಾ ಪದವೀಧರನಾಗಿದ್ದ ಈತನಿಗೆ ಅರಿವಳಿಕೆ ಬಗ್ಗೆ ಮಾಹಿತಿಯಿದ್ದ ಕಾರಣ ಈ ದುಸ್ಸಾಹಸಕ್ಕೆ ಕೈಹಾಕಿದ್ದ. ಪೊಲೀಸರು ಸ್ಥಳಕ್ಕೆ ಬಂದಾಗ ಇಬ್ಬರು ಅನಾಮಿಕರು ತನ್ನ ಮೇಲೆ ಹಲ್ಲೆ ನಡೆಸಿ ಕಾಲು ಕತ್ತರಿಸಿದ್ದಾರೆ ಎಂದು ಸುಳ್ಳು ಕಥೆ ಕಟ್ಟಿದ್ದನು.
ಪೊಲೀಸರಿಗೆ ಈತನ ಹೇಳಿಕೆಗಳಲ್ಲಿನ ವ್ಯತ್ಯಾಸ ಹಾಗೂ ಘಟನಾ ಸ್ಥಳದಲ್ಲಿ ದೊರೆತ ಅರಿವಳಿಕೆ ಬಾಟಲಿ ಸಂಶಯ ಮೂಡಿಸಿತ್ತು. ಬಳಿಕ ಆತನ ಡೈರಿ ಮತ್ತು ಪ್ರಿಯತಮೆಯ ವಿಚಾರಣೆಯಿಂದ ಅಸಲಿ ಸತ್ಯ ಹೊರಬಿದ್ದಿದೆ. 2026ರ ನೀಟ್ ಪರೀಕ್ಷೆಯಲ್ಲಿ ಹೇಗಾದರೂ ಮಾಡಿ ಸೀಟು ಪಡೆಯಲೇಬೇಕು ಮತ್ತು ಅದಕ್ಕಾಗಿ ಅಂಗವಿಕಲ ಕೋಟಾದ ಪ್ರಮಾಣಪತ್ರ ಪಡೆಯಲು ಈ ಹಂತಕ್ಕೆ ಹೋಗಿರುವುದು ದೃಢಪಟ್ಟಿದೆ. ಸದ್ಯ ಪೊಲೀಸರು ಪ್ರಕರಣದ ಮುಂದಿನ ಕ್ರಮ ಕೈಗೊಂಡಿದ್ದಾರೆ.